ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಡ್ರಗ್ಸ್ ಕೇಸ್ನ ತನಿಖೆಯ ನೇತೃತ್ವ ವಹಿಸಿದ್ದ ಮುಂಬೈ ವಲಯ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರಿಗೆ ಭಾರಿ ಹಿನ್ನಡೆಯಾಗಿದೆ. ಸದ್ಯಕ್ಕೆ ಪ್ರಕರಣದ ತನಿಖೆಯನ್ನು ದೆಹಲಿ ಎನ್‌ಸಿಬಿ ತಂಡಕ್ಕೆ ಹಸ್ತಾಂತರಿಸಲಾಗಿದೆ.
ಆರ್ಯನ್ ಖಾನ್ ಪ್ರಕರಣ ಮತ್ತು ಇತರ 5 ಪ್ರಕರಣಗಳು ಸೇರಿದಂತೆ ನಮ್ಮ ವಲಯದ ಒಟ್ಟು 6 ಪ್ರಕರಣದ ತನಿಖೆಯನ್ನು ದೆಹಲಿಯ ಎನ್‌ಸಿಬಿ ತಂಡ ಕೈಗೆತ್ತಿಕೊಳ್ಳಲಿದೆ. ಇದು ಆಡಳಿತಾತ್ಮಕ ನಿರ್ಧಾರವಾಗಿದೆ ಎಂದು ಎನ್‌ಸಿಬಿಯ ನೈರುತ್ಯ ವಲಯದ ಡೆಪ್ಯುಟಿ ಡಿಜಿ ಮುತಾ ಅಶೋಕ್ ಜೈನ್ ಸ್ಪಷ್ಟನೆ ನೀಡಿದ್ದಾರೆ. ಪ್ರಕರಣಗಳ ತನಿಖೆಯನ್ನು ವಹಿಸಿಕೊಳ್ಳಲು ದೆಹಲಿ ಎನ್‌ಸಿಬಿಯ ತಂಡ ಶನಿವಾರ ಮುಂಬೈಗೆ ಆಗಮಿಸಲಿದೆ ಎಂದು ಅವರು ಹೇಳಿದ್ದಾರೆ.
ಇನ್ನೊಂದೆಡೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ಎನ್‌ಸಿಬಿ, ಯಾವುದೇ ಅಧಿಕಾರಿಯನ್ನೂ ತನಿಖಾ ತಂಡದಿಂದ ತೆಗೆದುಹಾಕಲಾಗಿಲ್ಲ. ಅವರು ತನಿಖೆಯಲ್ಲಿ ಸಹಕಾರ ನೀಡಲಿದ್ದಾರೆ. ಮುಂದಿನ ಆದೇಶದವರೆಗೆ ಅವರು ತಮ್ಮ ಸ್ಥಾನದಲ್ಲಿಯೇ ಮುಂದುವರೆಯಲಿದ್ದಾರೆ ಎಂದು ಎನ್ಸಿಬಿಯನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
ಸಮೀರ್ ವಾಂಖೆಡೆ ಹೇಳಿಕೆ:
ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಪ್ರತಿಕ್ರಿಯಿಸಿದ್ದು, ನನ್ನನ್ನು ತನಿಖೆಯಿಂದ ತೆಗೆದುಹಾಕಿಲ್ಲ. ಕೇಂದ್ರೀಯ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ನಾನು ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದೆ. ಈ ಹಿನ್ನೆಲೆಯಲ್ಲಿ ಆರ್ಯನ್ ಖಾನ್ ಮತ್ತು ಸಮೀರ್ ಖಾನ್ ಪ್ರಕರಣವನ್ನು ದೆಹಲಿ ಎನ್‌ಸಿಬಿಯ ಎಸ್ಐಟಿಗೆ ವಹಿಸಲಾಗಿದೆ. ಇದು ದೆಹಲಿ ಮತ್ತು ಮುಂಬೈ ಎನ್‌ಸಿಬಿ ನಡುವಿನ ಸಮನ್ವಯತೆ ಆಗಿದೆ ಎಂದು ಎಎನ್ಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನು ಮೇಕಪ್‌ರಹಿತವಾಗಿ ನೋಡಿ ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತಿ!