ರೋಹ್ತಾಸ್ (ಬಿಹಾರ): ದೇಶದಲ್ಲಿ ಇತ್ತೀಚೆಗೆ ಸಲಿಂಗ ಮದುವೆ ಪ್ರಕರಣಗಳು ನಿರಂತರವಾಗಿ ವರದಿ ಆಗುತ್ತಿವೆ. ಇದರ ನಡುವೆ ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರು ಸಲಿಂಗ ಮದುವೆಯಾಗಿರುವ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇವರ ವಿವಾಹಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಬಾಲಕಿಯರು ತಮಗೆ ರಕ್ಷಣೆ ನೀಡುವಂತೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಆದರೆ, ಬಾಲಕಿಯರ ಮದುವೆ ವಿಷಯ ತಿಳಿದು ಸ್ವತಃ ಪೊಲೀಸರು ಸಹ ಆಶ್ಚರ್ಯಚಕಿತರಾಗಿದ್ದಾರೆ.
ಇಲ್ಲಿನ ಸೂರ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಲಿಗಂಜ್‌ನಲ್ಲಿ ಈ ಸಲಿಂಗ ವಿವಾಹ ನಡೆದಿದೆ. ಇಬ್ಬರು ಗೆಳೆಯತಿಯರು ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದರು. ಆದರೆ, ಮದುವೆಯನ್ನು ಕುಟುಂಬ ಸದಸ್ಯರು ಒಪ್ಪಿಲ್ಲ. ಆದ್ದರಿಂದ ಪೊಲೀಸ್ ಠಾಣೆಗೆ ತೆರಳಿ ತಮ್ಮ ಮದುವೆಯ ಬಗ್ಗೆ ಪೊಲೀಸರಿಗೆ ತಿಳಿಸಿ ತಮಗೆ ರಕ್ಷಣೆ ನೀಡಬೇಕೆಂದು ಈ ಜೋಡಿ ಮನವಿ ಮಾಡಿದೆ.
ಪೊಲೀಸರ ಮಾಹಿತಿ ಪ್ರಕಾರ, ಇಬ್ಬರು ಬಾಲಕಿಯರ ನೆರೆ-ಹೊರೆಯವರಾಗಿದ್ದಾರೆ. ಇವರ ಮನೆಗಳು ಎದುರುಬದುರು ಇದ್ದುದರಿಂದ ಒಬ್ಬರ ಮನೆಗೆ ಒಬ್ಬರು ಭೇಟಿ ನೀಡುತ್ತಿದ್ದರು. ಇಬ್ಬರೂ ಒಟ್ಟಿಗೆ ಶಾಲೆ, ಟ್ಯೂಷನ್‌ಗೆ ಹೋಗುತ್ತಿದ್ದರು. ಒಟ್ಟಿಗೆ ಊಟ ಮಾಡುತ್ತಿದ್ದರು ಮತ್ತು ಮಲಗುತ್ತಿದ್ದರು. ಇಬ್ಬರೂ ಒಟ್ಟಿಗೆ ಇರಲು ಇಷ್ಟಪಡುತ್ತಿದ್ದರು. ಅಷ್ಟರಲ್ಲಿ ಇಬ್ಬರ ನಡುವೆ ಪ್ರೀತಿಯೂ ಜೋರಾಗಿದೆ.
ಬಾಲ್ಯದಿಂದಲೂ ಇಬ್ಬರು ಒಟ್ಟಿಗೆ ಬೆಳೆದು, ಒಟ್ಟಿಗೆ ಸುತ್ತಾಟ ಮಾಡುತ್ತಿದ್ದರಿಂದ ಮದುವೆಯಾಗುವ ಆಲೋಚನೆ ಮೂಡಿದೆ. ಅಂತೆಯೇ, ಇತ್ತೀಚೆಗೆ ಇಬ್ಬರೂ ಸಮೀಪದ ಭಾಲುನಿ ಭವಾನಿಧಾಮಕ್ಕೆ ಹೋಗಿ ಏಳು ಸುತ್ತು ಹಾಕಿ ಸಿಂಧೂರ ಹಚ್ಚಿಕೊಂಡು ವಿವಾಹವಾಗಿದ್ದಾರೆ. ಆದರೆ, ಬಾಲಕಿಯರ ಮದುವೆ ವಿಷಯ ತಿಳಿದ ಎರಡು ಕಡೆ ಕುಟುಂಬಸ್ಥರು ವಿರೋಧಿಸಿದ್ದಾರೆ. ಇದರಿಂದಾಗಿ ತಮಗೆ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಬಂದಿದ್ದಾರೆ.
ಈ ಬಗ್ಗೆ ಸೂರ್ಯಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಪ್ರಿಯಾ ಕುಮಾರಿ ಪ್ರತಿಕ್ರಿಯಿಸಿ, ಮದುವೆಯಾದ ಈ ಇಬ್ಬರು ಬಾಲಕಿಯರು ಇನ್ನೂ ಅಪ್ರಾಪ್ತರು. ನಾವು ಒಟ್ಟಿಗೆ ಜೀವಿಸುತ್ತೇವೆ ಎಂದು ಠಾಣೆಗೆ ಬಂದಿದ್ದರು. ಈ ವೇಳೆ ಇಬ್ಬರ ಕಡೆಯ ಪೋಷಕರನ್ನು ಠಾಣೆಗೆ ಕರೆಸಿ ವಿಷಯ ತಿಳಿ ಹೇಳಲಾಗಿದೆ. ಅಲ್ಲದೇ, ಇಬ್ಬರಿಗೆ ಬಾಲಕಿಯರಿಗೆ ಬುದ್ಧಿ ಹೇಳಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಈ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಸಂಬಂಧಿಕರು ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಯುವತಿಯರ ಮಧ್ಯೆ ಪ್ರೀತಿ.. ಮದುವೆ ನೋಂದಣಿಗಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ ಪ್ರೇಮಿಗಳು