ನವದೆಹಲಿ: ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವ ವಿಷಯದ ಕುರಿತು ದೇಶಾದ್ಯಂತ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಎಲ್ಲ ಅರ್ಜಿಗಳನ್ನು ಸುಪ್ರೀಂಕೋರ್ಟ್ ಶುಕ್ರವಾರ ಒಟ್ಟುಗೂಡಿಸಿ ತನಗೆ ವರ್ಗಾಯಿಸಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆಬಿ ಪಾರ್ದಿವಾಲಾ ಅವರ ಪೀಠವು ಫೆಬ್ರವರಿ 15 ರೊಳಗೆ ಎಲ್ಲ ಅರ್ಜಿಗಳಿಗೆ ಜಂಟಿ ಉತ್ತರ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ. ಮಾರ್ಚ್‌ನಲ್ಲಿ ಎಲ್ಲ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಪೀಠ ತಿಳಿಸಿದೆ.
ಯಾವುದೇ ಅರ್ಜಿದಾರರು, ನ್ಯಾಯಾಲಯದ ಮುಂದೆ ದೈಹಿಕವಾಗಿ ವಾದಿಸಲು ಸಾಧ್ಯವಾಗದಿದ್ದರೆ ಅಂಥವರು ವರ್ಚುಯಲ್ ಪ್ಲಾಟ್‌ಫಾರ್ಮ್ ಸೌಲಭ್ಯವನ್ನು ಪಡೆಯಬಹುದು ಎಂದು ಪೀಠ ಹೇಳಿದೆ. ಸಮಸ್ಯೆ, ಕಾನೂನುಗಳು ಮತ್ತು ಪೂರ್ವನಿದರ್ಶನಗಳ ಬಗ್ಗೆ ಲಿಖಿತ ಟಿಪ್ಪಣಿಯನ್ನು ಸಲ್ಲಿಸಲು ಮತ್ತು ಅದನ್ನು ತಮ್ಮೊಂದಿಗೆ ಮತ್ತು ನ್ಯಾಯಾಲಯದಲ್ಲಿ ಹಂಚಿಕೊಳ್ಳುವಂತೆ ಕೇಂದ್ರದ ವಕೀಲರು ಮತ್ತು ಅರ್ಜಿದಾರರಿಗೆ ಪೀಠ ಸೂಚಿಸಿದೆ. ಯಾವುದೇ ಅರ್ಜಿದಾರರು ವಿಚಾರಣೆಯಿಂದ ಹೊರಗುಳಿಯದಂತೆ ಮತ್ತು ಎಲ್ಲ ಅರ್ಜಿಗಳ ವಿವರಗಳನ್ನು ದಾಖಲೆಗಳಲ್ಲಿ ಅಳವಡಿಸುವಂತೆ ಪೀಠವು ಕೇಂದ್ರದ ವಕೀಲರಿಗೆ ತಿಳಿಸಿದೆ.
ಕೋರ್ಟ್ ಮುಂದೆ ಎರಡು ಆಯ್ಕೆ: ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಯ ಸಮಯ ಕೂಡಿ ಬಂದಿರುವ ಸಮಯದಲ್ಲಿ ನ್ಯಾಯಾಲಯದ ಮುಂದೆ ಎರಡು ಆಯ್ಕೆಗಳಿವೆ. ಸುಪ್ರೀಂ ಕೋರ್ಟ್ ಹೈಕೋರ್ಟ್ಗಳ ತೀರ್ಪುಗಳಿಗಾಗಿ ಕಾಯಬಹುದು ಅಥವಾ ಅದು ಎಲ್ಲ ಅರ್ಜಿಗಳನ್ನು ಸ್ವತಃ ತನಗೆ ವರ್ಗಾಯಿಸಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ತಿಳಿಸಿದರು. ಬಹುತೇಕ ಅರ್ಜಿದಾರರ ಪರ ವಕೀಲರು ಎಲ್ಲ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಸ್ವತಃ ವರ್ಗಾಯಿಸಿಕೊಳ್ಳುವಂತೆ ಬಯಸುವುದಾಗಿ ಮತ್ತು ಕೇಂದ್ರವು ತನ್ನ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬಹುದು ಎಂದು ಪೀಠಕ್ಕೆ ತಿಳಿಸಿದರು.
ಕೇಂದ್ರದಿಂದ ಪ್ರತಿಕ್ರಿಯೆ ಕೋರಿದ್ದ ಸುಪ್ರೀಂ: ಸಲಿಂಗ ವಿವಾಹಗಳ ಮಾನ್ಯತೆಗಾಗಿ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಜನವರಿ 6 ರಂದು ವಿಚಾರಣೆ ನಡೆಸುವುದಾಗಿ ಜನವರಿ 3 ರಂದು ಸುಪ್ರೀಂ ಕೋರ್ಟ್ ಹೇಳಿತ್ತು. ಕಳೆದ ವರ್ಷ ಡಿಸೆಂಬರ್ 14 ರಂದು ಸಲಿಂಗ ವಿವಾಹಗಳನ್ನು ಗುರುತಿಸಲು ನಿರ್ದೇಶನಗಳಿಗಾಗಿ ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಎರಡು ಮನವಿಗಳ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರದಿಂದ ಪ್ರತಿಕ್ರಿಯೆ ಕೋರಿತ್ತು.
ಇದಕ್ಕೂ ಮೊದಲು, ಕಳೆದ ವರ್ಷ ನವೆಂಬರ್ 25 ರಂದು ಇಬ್ಬರು ಸಲಿಂಗಕಾಮಿ ದಂಪತಿಗಳು ತಮ್ಮ ವಿವಾಹದ ಹಕ್ಕನ್ನು ಜಾರಿಗೊಳಿಸುವಂತೆ ಮತ್ತು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಲು ಅಧಿಕಾರಿಗಳಿಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಪ್ರತ್ಯೇಕ ಮನವಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೇಳಿತ್ತು.
ಕೇಂದ್ರ ಸರ್ಕಾರವು ಸಲಿಂಗ ವಿವಾಹವನ್ನು ಈ ಹಿಂದೆ ವಿರೋಧಿಸಿದೆ. ‘ಭಾರತದಲ್ಲಿ ವಿವಾಹವು ಹಿಂದಿನಿಂದಲೂ ಬಂದಿರುವ ಸಂಪ್ರದಾಯಗಳು, ಆಚರಣೆಗಳು, ವಿಧಿಗಳು, ಸಾಂಸ್ಕೃತಿಕ ಮೌಲ್ಯಗಳು ಮತ್ತು ಸಾಮಾಜಿಕ ಮೌಲ್ಯಗಳ ಮೇಲೆ ನಿಂತಿರುತ್ತದೆ’ ಎಂದು ಸರ್ಕಾರ ಹೇಳಿತ್ತು. ಸಲಿಂಗ ವಿವಾಹವನ್ನು ಕಾನೂನಿನ ಅಡಿ ಮಾನ್ಯ ಮಾಡುವ ರೀತಿಯಲ್ಲಿ ಯಾವ ಮೂಲಭೂತ ಹಕ್ಕಿನ ವ್ಯಾಪ್ತಿಯನ್ನೂ ವಿಸ್ತರಿಸಲು ಆಗದು ಎಂದು ಅದು ಹೇಳಿತ್ತು.
ಇದನ್ನೂ ಓದಿ: ಸಲಿಂಗ ವಿವಾಹವಾಗಿ ಅಭಿಮಾನಿಗಳ ಎದೆಗೆ ಬೆಂಕಿ ಇಟ್ಟ ವಿಶ್ವವಿಖ್ಯಾತ ಸುಂದರಿಯರು!