ಚಂಡೀಗಢ (ಪಂಜಾಬ್): ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಸಂಚು ರೂಪಿಸಿದ್ದ ಹಾಗೂ ಈಗಾಗಲೇ ಜೈಲು ಪಾಲಾಗಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಟಾರ್ಗೆಟ್ ಲಿಸ್ಟ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿದ್ದರು ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಬಹಿರಂಗ ಮಾಡಿದ್ದಾರೆ.
ಮೂಸೆವಾಲಾ ಕೊಲೆ ಪ್ರಕರಣದ ಆರೋಪಿ ಕಪಿಲ್ ಪಂಡಿತ್‌ನ ಪ್ರಾಥಮಿಕ ವಿಚಾರಣೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ಹತ್ಯೆಯನ್ನು ನಡೆಸಲು ಸಂಪತ್ ನೆಹ್ರಾ ಮತ್ತು ಕೆನಡಾ ಮೂಲದ ಗೋಲ್ಡಿ ಬ್ರಾರ್ ಮೂಲಕ ನನ್ನನ್ನು ಸಂಪರ್ಕಿಸಲಾಗಿತ್ತು ಅಂತಾ ಕಪಿಲ್ ಪಂಡಿತ್ ಬಾಯ್ಬಿಟ್ಟಿದ್ದಾನೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥರಾದ ಗೌರವ್ ಯಾದವ್ ಭಾನುವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಪತ್ರ ಬರೆದಿದ್ದು ಗ್ಯಾಂಗ್‌ಸ್ಟರ್ ಬಿಷ್ಣೋಯಿ ಆಪ್ತ
ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ ಬಂಧಿತರಾಗಿರುವ ಸಂತೋಷ್ ಜಾಧವ್ ಮತ್ತು ಅಜೆರ್ಬೈಜಾನ್ನಲ್ಲಿ ಬಂಧಿತರಾಗಿರುವ ಸಚಿನ್ ಥಾಪನ್ ಕೂಡ ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿದ್ದರು. ಮೇ 29ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಮೂಸೆವಾಲಾ ಕೊಲೆಯಾದ ಕೆಲವು ದಿನಗಳ ನಂತರ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಬಂದಿತ್ತು.
ಡಿಜಿಪಿ ಗೌರವ್ ಯಾದವ್ ಹೇಳಿದ್ದೇನು?: ಬಾಲಿವುಡ್ ನಟ ಸಲ್ಮಾನ್ ಖಾನ್ ಟಾರ್ಗೆಟ್ ಮಾಡಿದ್ದ ಗ್ಯಾಂಗ್ನವರು ಮುಂಬೈನಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದಾರೆ. ಅಲ್ಲದೇ, ಸಾಕಷ್ಟು ಸಂಚಾರ ಕೂಡ ಮಾಡಿದ್ದಾರೆ ಎಂಬುದು ನಮ್ಮ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಡಿಜಿಪಿ ಗೌರವ್ ಯಾದವ್ ಮಾಹಿತಿ ನೀಡಿದರು. ಅಲ್ಲದೇ, ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿರುವ ಕಾರಣವಿನ್ನೂ ಪ್ರಾಥಮಿಕವಾಗಿ ದೃಢೀಕರಿಸಲ್ಪಟ್ಟಿಲ್ಲ. ಮುಂಬೈಗೆ ತಂಡವನ್ನು ನಾವು ಕಳುಹಿಸಲು ತೀರ್ಮಾನಿಸಿದ್ದೇವೆ ಎಂದರು.
ಯುವ ಅಕಾಲಿ ದಳದ ನಾಯಕ ವಿಕ್ಕಿ ಮಿದ್ದುಖೇರಾ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸೂಚನೆ ಮೇರೆಗೆ ಮೂಸೆವಾಲಾ ಹತ್ಯೆಗೆ ಈ ಹಿಂದೆಯೂ ಉದ್ದೇಶಿಸಲಾಗಿತ್ತು ಎಂದು ಪಂಡಿತ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ ಎಂದು ಡಿಜಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: ನಟ ಸಲ್ಮಾನ್ಗೆ ಜೀವ ಬೆದರಿಕೆ ಪತ್ರ ಯಾರು ಬರೆದಿದ್ದಾರೋ ಗೊತ್ತಿಲ್ಲ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ
ಪಂಡಿತ್ ತನ್ನ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೆರೋಲ್ ಪಡೆದಿದ್ದ. ನಂತರ ರಾಜಸ್ಥಾನದ ಚುರು ಜಿಲ್ಲೆಯ ಬೇವಾಡ್ ಗ್ರಾಮದಲ್ಲಿ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ. ಜೊತೆಗೆ ವಿದೇಶಕ್ಕೆ ಪರಾರಿಯಾಗಿರುವ ಗ್ಯಾಂಗ್ಸ್ಟರ್ಗಳನ್ನು ಬಂಧಿಸಲು ಸತತ ಪ್ರಯತ್ನ ನಡೆಸಲಾಗುತ್ತಿದೆ. ಇದರ ಪರಿಣಾಮವಾಗಿ ಗ್ಯಾಂಗ್‌ಸ್ಟರ್ ಸಚಿನ್ ಥಾಪನ್‌ನನ್ನು ಅಜರ್‌ಬೈಜಾನ್‌ನಲ್ಲಿ ಬಂಧಿಸಲಾಗಿದೆ. ಶೀಘ್ರದಲ್ಲೇ ಆತನನ್ನು ಭಾರತಕ್ಕೆ ಕರೆ ತರಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇನ್ನು, ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಆರನೇ ಮತ್ತು ಕೊನೆಯ ಶೂಟರ್ ದೀಪಕ್ ಮುಂಡಿಯನ್ನು ಪಂಜಾಬ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈತನ ಇಬ್ಬರು ಸಹಾಯಕರಾದ ಕಪಿಲ್ ಪಂಡಿತ್ ಮತ್ತು ರಾಜಿಂದರ್ ಜೋಕರ್ನನ್ನು ಪಶ್ಚಿಮ ಬಂಗಾಳದ ಇಂಡೋ-ನೇಪಾಳ ಗಡಿಯಿಂದ ನೇಪಾಳಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಪಂಜಾಬ್ ಪೊಲೀಸರ ಆ್ಯಂಟಿ ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್ (ಎಜಿಟಿಎಫ್) ಮತ್ತು ದೆಹಲಿ ಪೊಲೀಸರು ಮತ್ತು ಕೇಂದ್ರೀಯ ಏಜೆನ್ಸಿಗಳು ಜಂಟಿಯಾಗಿ ನಡೆಸಿವೆ. ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 23ಕ್ಕೆ ಏರಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಹತ್ಯೆಗೆ ಸಂಚು: ಶಾರ್ಪ್‌ಶೂಟರ್ ಬಂಧನ