ಹರಿದ್ವಾರ (ಉತ್ತರಾಖಂಡ): ಲೋಕಜ್ಞಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಂತರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮಿಂಚುತ್ತಿದ್ದಾರೆ. ಸಿನಿಮಾ ತಾರೆಯರು, ರಾಜಕಾರಣಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರಿಯತೆ ಗಳಿಸುವ ಜತೆಗೆ ತಮ್ಮ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ರೀತಿಯಲ್ಲಿಯೇ ಇದೀಗ ಸಂತ ಸಮಾಜ ಕೂಡ ಅದೇ ಹಾದಿಯಲ್ಲಿ ಸಾಗಿದೆ.
ಹರಿದ್ವಾರಕ್ಕೆ ಸಂಬಂಧಿಸಿದ ಅನೇಕ ದೊಡ್ಡ ದೊಡ್ಡ ಸಂತರು ಈಗ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ರೀಲ್ಸ್ಗಳು, ಮೀಮ್‌ಗಳು ಮತ್ತು ಎಲ್ಲ ರೀತಿಯ ವಿಡಿಯೋ ಮತ್ತು ಆಡಿಯೋಗಳು ಅವರ ಖಾತೆಯಲ್ಲಿವೆ.
ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮ ತನ್ನದೇ ಆದ ರೀತಿಯಲ್ಲಿ ಬಹಳ ಮುಖ್ಯ ಕೆಲಸ ಮಾಡುತ್ತಿದೆ. ಈ ಕಾರಣದಿಂದಲೇ ಕೆಲವು ವರ್ಷಗಳಿಂದ ಸಮಾಜದ ಪ್ರತಿಯೊಂದು ವರ್ಗವೂ ಇದರತ್ತ ವೇಗವಾಗಿ ಆಕರ್ಷಿತವಾಗುತ್ತಿದೆ. ಲೌಕಿಕ ಲೋಕದಿಂದ ದೂರದಲ್ಲಿರುವ ಸಾಧುಗಳು ಮತ್ತು ಸಂತರು ಸಹ ಇದರಲ್ಲಿ ತುಂಬಾ ಸಕ್ರಿಯರಾಗಿರುವುದು ವಿಶೇಷ.
ಇಂದು ಈ ಮಾಧ್ಯಮದ ಮೂಲಕ ಯಾವುದೇ ವಿಷಯದ ಬಗ್ಗೆ ಸಾಧುಗಳು ಧ್ವನಿಯೆತ್ತುತ್ತಿದ್ದಾರೆ. ಧರ್ಮ ಪ್ರಚಾರವಾಗಲಿ ಅಥವಾ ಅನುಯಾಯಿಗಳೊಂದಿಗೆ ನೇರ ಸಂವಹನವಾಗಲಿ ತಮ್ಮದೇ ರೀತಿಯಲ್ಲಿ ಅದನ್ನು ಸದ್ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಈ ಮೂಲಕ ಈ ಬಾಬಾಗಳು ಯಾವ ಫೆಮಸ್ ನಟರಿಗೂ ಕಡಿಮೆ ಇಲ್ಲ ಎಂದು ಹೇಳಬಹುದಾಗಿದೆ. ಹಾಗಾದರೆ, ಯಾರ್ಯಾರು ಇದನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.
ಬಾಬಾ ರಾಮದೇವ್ : ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ರಾಮ್‌ದೇವ್ ಅಗ್ರಸ್ಥಾನದಲ್ಲಿದ್ದಾರೆ. ಅವರ ಜನಪ್ರಿಯತೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಬಾಬಾ ರಾಮ್‌ದೇವ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.
ಅವರ ಸಾಮಾಜಿಕ ಮಾಧ್ಯಮ ತಂಡವು ನಿರಂತರವಾಗಿ ಅವರ ರೀಲ್ಸ್ಗಳು, ಫೋಟೋಗಳು, ಹೇಳಿಕೆಗಳು ಮತ್ತು ಘಟನೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುತ್ತಲೇ ಇದೆ. ಬಾಬಾ ರಾಮ್‌ದೇವ್ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋಗಳು ಮಿಲಿಯನ್ಗಟ್ಟಲೇ ವೀಕ್ಷಿಸಲ್ಪಟ್ಟಿವೆ.
ಫೇಸ್ಬುಕ್ - 11 ಮಿಲಿಯನ್ ಅಂದರೆ 1 ಕೋಟಿ 10 ಲಕ್ಷ ಜನ ಅಭಿಮಾನಿಗಳು ಇದ್ದಾರೆ.
ಇನ್ಸ್ಟಾಗ್ರಾಂ - 20 ಲಕ್ಷ ಫಾಲೋವರ್ಸ್
ಟ್ವಿಟರ್ - 26 ಲಕ್ಷ
ಸ್ವಾಮಿ ಕೈಲಾಶಾನಂದ ಗಿರಿ : ಬಾಬಾ ರಾಮದೇವ್ ನಂತರ ನಿರಂಜನಿ ಅಖಾರದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಅವರ ಹೆಸರು ಈ ಪಟ್ಟಿಯಲ್ಲಿ ಬರುತ್ತದೆ. ಸ್ವಾಮಿ ಕೈಲಾಶಾನಂದ ಗಿರಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ಪೂಜೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಪ್ಲೋಡ್ ಮಾಡಲಾಗುತ್ತದೆ.
ಅವರ ಪೂಜೆಯನ್ನು ಕೆಲವೊಮ್ಮೆ ಸಾಮಾಜಿಕ ಮಾಧ್ಯಮ ಪುಟಗಳ ಮೂಲಕ ನೇರವಾಗಿ ತೋರಿಸಲಾಗುತ್ತದೆ. ಇದರೊಂದಿಗೆ ಸ್ವಾಮಿ ಕೈಲಾಶಾನಂದ ಗಿರಿ ಅವರು ತಮ್ಮ ಅನುಯಾಯಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.
ಫೇಸ್ಬುಕ್ - 88 ಸಾವಿರ ಫಾಲೋವರ್ಸ್ ಇದ್ದಾರೆ
ಇನ್ಸ್ಟಾಗ್ರಾಂ - 38.6 ಸಾವಿರ
ಚಿದಾನಂದ ಮುನಿ: ಪರಮಾರ್ಥ ನಿಕೇತನದ ಪರಮ ಅಧ್ಯಕ್ಷ ಚಿದಾನಂದ ಮುನಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಕ್ರಿಯರಾಗಿದ್ದಾರೆ. ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳೊಂದಿಗಿನ ಅವರ ಫೋಟೋಗಳನ್ನು ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ನಿರಂತರವಾಗಿ ಅಪ್ಲೋಡ್ ಮಾಡಲಾಗುತ್ತದೆ. ಅವರ ಸಾಮಾಜಿಕ ಮಾಧ್ಯಮ ತಂಡದಿಂದ ಆಗಾಗ್ಗೆ ರೀಲ್ಸ್ಗಳನ್ನು ಸಹ ಅಪ್‌ಲೋಡ್ ಮಾಡಲಾಗುತ್ತಿದೆ.
ಪರಮಾರ್ಥ ನಿಕೇತನದ ಗಂಗಾ ಆರತಿಯನ್ನು ಪ್ರತಿದಿನ ಅವರ ಪುಟದಲ್ಲಿ ಲೈವ್ ಮಾಡಲಾಗುತ್ತದೆ, ಇದನ್ನು ಲಕ್ಷಾಂತರ ಜನರು ಆನ್‌ಲೈನ್‌ನಲ್ಲಿ ವೀಕ್ಷಿಸುತ್ತಾರೆ.
ಫೇಸ್ಬುಕ್ - 38 ಸಾವಿರ ಅನುಯಾಯಿಗನ್ನು ಹೊಂದಿದ್ದಾರೆ
ಇನ್ಸ್ಟಾಗ್ರಾಂ - 25.2 ಸಾವಿರ
ಟ್ವಿಟರ್ - 13.9 ಸಾವಿರ
ವೈಯಕ್ತಿಕ ಸಾಮಾಜಿಕ ಮಾಧ್ಯಮ ತಂಡ: ಇನ್ನು ಅನೇಕ ಸಂತರು ತಮ್ಮ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸಲು ವೈಯಕ್ತಿಕ ತಂಡವನ್ನು ನಿಯೋಜನೆ ಮಾಡಿಕೊಂಡಿದ್ದಾರೆ. ದೆಹಲಿ ಮತ್ತು ನೋಯ್ಡಾದಿಂದ ಅನೇಕ ಋಷಿಗಳು ಈ ತಂಡಗಳ ಸಹವರ್ತಿಗಳನ್ನು ನೇಮಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ.
ಈ ಪ್ರವೃತ್ತಿಗೆ ಅನೇಕ ಸಂತರು ವಿರುದ್ಧ : ಇತರ ಸಂತರನ್ನು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಮತ್ತು ರೀಲ್ಸ್ ಮಾಡುವ ಬಗ್ಗೆ ಈಟಿವಿ ಭಾರತ ಕೇಳಿದಾಗ, ಅವರು ಅದನ್ನು ವಿರೋಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳು ಕೇವಲ ಪ್ರಚಾರದ ಮಾಧ್ಯಮವಾಗಿದೆ ಎಂದಿದ್ದಾರೆ. ಇಂದಿನ ದಿನಗಳಲ್ಲಿ ಜನರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಂತರು ಅದನ್ನು ತಮ್ಮ ಧರ್ಮ ಪ್ರಚಾರಕ್ಕೆ ಬಳಸುತ್ತಿದ್ದರೆ ತಪ್ಪೇನಿಲ್ಲ.ಆದರೆ,ತಮ್ಮ ಜನಪ್ರಿಯತೆಯನ್ನು ಪಡೆಯಲು ಬಳಸುತ್ತಿದ್ದರೆ ಅದು ತಪ್ಪು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್ನಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್