ಹರಿದ್ವಾರ(ಉತ್ತರಾಖಂಡ): ಜನವರಿ 25ರಂದು ಬಿಡುಗಡೆಗೆ ಸಜ್ಜಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಸಿನಿಮಾದ ವಿರುದ್ಧ ಹರಿದ್ವಾರದ ಸಂತರು ಧ್ವನಿ ಎತ್ತಿದ್ದು, ಚಿತ್ರವನ್ನು ಬಹಿಷ್ಕರಿಸುವಂತೆ ಆಗ್ರಹಿಸಿದ್ದಾರೆ.
'ಬೇಷರಮ್ ರಂಗ್' ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿರುವುದು ವಿವಾದದ ಕೇಂದ್ರ ಬಿಂದು. ಹೀಗಾಗಿ ಚಿತ್ರವನ್ನು ಬಾಯ್ಕಾಟ್ ಮಾಡಬೇಕೆಂಬ ಕೂಗು ಜೋರಾಗಿದೆ. ಅಷ್ಟೇ ಅಲ್ಲ, ಸಿನಿಮಾದ ಹೆಸರಿನ ಬಗ್ಗೆಯೂ ಸಂತರು ಅಪಸ್ವರ ಎತ್ತಿದ್ದಾರೆ.
ಕೇಸರಿ ಬಣ್ಣದ ದೃಶ್ಯ ತೆಗೆಯಬೇಕು: ಭಾರತದಲ್ಲಿ ಅನೇಕ ಮಹಾನ್ ನಾಯಕರು, ಯೋಧರು ಆಗಿ ಹೋಗಿದ್ದಾರೆ. ಇಂತಹ ಮಹಾನ್ ನಾಯಕರಿಗೆ ಸಂಬಂಧಿಸಿದ ಚಲನಚಿತ್ರಗಳನ್ನು ಬಾಲಿವುಡ್‌ನಲ್ಲಿ ಮಾಡಲ್ಲ. ಕೇವಲ ಹಿಂದೂ ಧರ್ಮದ ವಿರುದ್ಧದ ಅಜೆಂಡಾವನ್ನು ಮಾತ್ರ ನಡೆಸುತ್ತಾರೆ. ಅದರಲ್ಲಿ ಹಿಂದೂ ಧರ್ಮವನ್ನು ದೂಷಿಸುತ್ತಾರೆ ಮತ್ತು ಜನರಲ್ಲಿ ಕೆಟ್ಟ ಪ್ರಚಾರವನ್ನು ಹರಡುತ್ತಾರೆ. ಇವರೆಲ್ಲ ಹಿಂದೂ ವಿರೋಧಿ ಕೆಲಸ ಮಾಡುತ್ತಿದ್ದಾರೆ ಎಂದು ಅಖಾರ ಪರಿಷತ್ ಅಧ್ಯಕ್ಷ ರವೀಂದ್ರ ಪುರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಟಿ ದೀಪಿಕಾ ಪಡುಕೋಣೆ ಹಿಂದೂ ಧರ್ಮದವರಾಗಿ 'ಪಠಾಣ್' ಚಿತ್ರದಲ್ಲಿ ಕೇಸರಿ ಬಣ್ಣವನ್ನು ಅವಮಾನಿಸುತ್ತಿದ್ದಾರೆ. ಇದನ್ನು ಒಪ್ಪಲಾಗದು. ಕೇಸರಿ ಬಣ್ಣದ ದೃಶ್ಯವನ್ನು ಹಾಡಿನಿಂದ ತೆಗೆದುಹಾಕಬೇಕು. ಇದನ್ನು ಮಾಡದಿದ್ದರೆ ಮುಂಬೈಗೆ ಹೋಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.
ಹಿಂದೂ ಧರ್ಮಕ್ಕೆ ಅಪಮಾನ: ಸಿನಿಮಾಗೆ 'ಪಠಾಣ್' ಹೆಸರಿಟ್ಟಿರುವ ಬಗ್ಗೆಯೂ ವಿಶ್ವ ಹಿಂದೂ ಪರಿಷತ್ತಿನ ನಾಯಕಿ ಸಾಧ್ವಿ ಪ್ರಾಚಿ ಲೇವಡಿ ಮಾಡಿದ್ದು, ಕತ್ತಿ ಭಯದಿಂದ ಇದೇ ಪಠಾಣ್ ಸಲ್ವಾರ್ ಧರಿಸಿದ್ದ. ಈಗ ತುಕ್ಡೆ-ತುಕ್ಡೆ ಗ್ಯಾಂಗ್‌ನ ಕೆಲವರು ತಮ್ಮ ಬಗ್ಗೆ ಸಿನಿಮಾ ಮಾಡಿ ಹಿಂದೂ ಧರ್ಮಕ್ಕೆ ಅಪಮಾನ ಮಾಡಲು ಹೊರಟಿದ್ದಾರೆ. ಇದನ್ನು ಸಹಿಸಲಾಗುವುದಿಲ್ಲ. ಪ್ರತಿಯೊಬ್ಬರು ಈ ಸಿನಿಮಾವನ್ನು ಬಹಿಷ್ಕರಿಸಬೇಕೆಂದು ಹೇಳಿದ್ದಾರೆ.
ವೈಷ್ಣೋದೇವಿ ಭೇಟಿ, ಹಜ್ ಯಾತ್ರೆ ಯಶಸ್ವಿಯಾಗಲ್ಲ: 'ಬೇಷರಮ್ ರಂಗ್' ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ಧರಿಸುವುದನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಳಿ ಸೇನೆಯ ಮುಖ್ಯಸ್ಥ ಸ್ವಾಮಿ ಆನಂದ್ ಸ್ವರೂಪ್ ಹೇಳಿದ್ದಾರೆ. ವೈಷ್ಣೋ ದೇವಿಗೆ ಹೋಗುವುದು ಅಥವಾ ಹಜ್ ಯಾತ್ರೆ ಮಾಡುವುದರಿಂದಲೂ ಶಾರುಖ್ ಖಾನ್ ಚಿತ್ರ ಯಶಸ್ವಿಯಾಗುವುದಿಲ್ಲ. ಇದು ಹಿಂದೂ ವಿರೋಧಿ ಚಿತ್ರ ಎಂಬ ಕಾರಣಕ್ಕೆ ಹಿಂದೂಗಳು ಈ ಸಿನಿಮಾ ನೋಡಲು ಹೋಗುವುದಿಲ್ಲ ಎಂದಿದ್ದಾರೆ.
ಇತಿಹಾಸದ ಕೊರತೆ ಇದೆಯೇ?: ಸ್ವಾಮಿ ದಿನೇಶ್ ಆನಂದ್ ಭಾರತಿ ಪ್ರಶ್ನೆ ಎತ್ತಿದ್ದು, ಭಾರತದಲ್ಲಿ ಇತಿಹಾಸದ ಕೊರತೆ ಇದೆಯೇ ಎಂದು ಕಿಡಿಕಾರಿದ್ದಾರೆ. ಭಾರತದ ನಿಜವಾದ ಇತಿಹಾಸವನ್ನು ಯಾರೂ ತೋರಿಸುತ್ತಿಲ್ಲ. ಪಠಾಣರು ಇಲ್ಲಿಂದ ಬಂದವರಲ್ಲ. ಹಿಂದೂಗಳ ಮಾನಹಾನಿ ಮಾಡುವ ಸಂದೇಶವನ್ನು ಚಿತ್ರ ನೀಡುತ್ತದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಜೊತೆಗೆ ಕೇಸರಿ ಪೂಜ್ಯ ಬಣ್ಣವಾಗಿದೆ. ಇದನ್ನು ಅಗ್ನಿ ವಸ್ತ್ರ ಎಂದೂ ಕರೆಯುತ್ತಾರೆ. ಕೇಸರಿ ಋಷಿಗಳು ಮತ್ತು ಸಂತರ ಗುರುತೆಂದೂ ಕರೆಯಲಾಗುತ್ತದೆ. ಆದರೆ, ಸಿನಿಮಾದಲ್ಲಿ ಈ ಬಣ್ಣದ ಅಪಮಾನ ಮಾಡುವ ಪ್ರಯತ್ನ ನಡೆದಿದೆ. ಹೀಗಾಗಿ ಪಠಾಣ್ ಸಿನಿಮಾವನ್ನು ಬಹಿಷ್ಕರಿಸಬೇಕೆಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: ಬೇಷರಮ್ ರಂಗ್ ವಿವಾದ: 'ಪಠಾಣ್' ಬಾಯ್ಕಾಟ್ ಬಗ್ಗೆ ಮೌನ ಮುರಿದ ಶಾರುಖ್ ಖಾನ್