ಸಾಗರ್(ಮಧ್ಯಪ್ರದೇಶ): ಸಾಗರ್ ಕೇಂದ್ರೀಯ ವಿವಿಯ ಶಿಕ್ಷಣ ವಿಭಾಗದ ಕೊಠಡಿಯಲ್ಲಿ ಹಿಜಾಬ್ ಧರಿಸಿ ನಮಾಜ್ ಮಾಡಿದ್ದ ವಿದ್ಯಾರ್ಥಿನಿ ತಪ್ಪನ್ನು ಒಪ್ಪಿಕೊಂಡಿದ್ದು, ಅಜ್ಞಾನದಿಂದ ಧಾರ್ಮಿಕ ಆಚರಣೆಯನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಮಾಡುವುದಿಲ್ಲ ಎಂದು ಕ್ಷಮೆ ಕೇಳಿದ್ದಾರೆ. ಇದರ ಜೊತೆಗೆ ಈ ರೀತಿಯಾಗಿ ಇನ್ನು ಮುಂದೆ ಮಾಡುವುದಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ವಿಡಿಯೋವೊಂದು ವೈರಲ್ ಆಗಿತ್ತು. ಕ್ಲಾಸ್ನಲ್ಲಿ ವಿದ್ಯಾರ್ಥಿನಿಯೋರ್ವಳು ನಮಾಜ್ ಮಾಡಿದ ವಿಡಿಯೋ ಇದಾಗಿದ್ದು, ಅನೇಕ ಹಿಂದೂಪರ ಸಂಘಟನೆಗಳು ಈ ಘಟನೆಯ ವಿರುದ್ಧ ದನಿಯೆತ್ತಿದ್ದವು. ಪ್ರತಿಭಟನೆಗಳು ಹೆಚ್ಚಾದಂತೆ ಸಾಗರ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ನೀಲಿಮಾ ಗುಪ್ತಾ ಅವರು 6 ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದ್ದರು. ತನಿಖಾ ಸಮಿತಿಯು ಗುರುವಾರ ಮಾರ್ಚ್ 31ರಂದು ತನ್ನ ವರದಿಯನ್ನು ಸಲ್ಲಿಸಿತು.
ತನಿಖಾ ಸಮಿತಿಯ ಮುಂದೆ ವಿದ್ಯಾರ್ಥಿನಿಯು ತನ್ನ ಅಜ್ಞಾನದಿಂದ ಧಾರ್ಮಿಕ ಚಟುವಟಿಕೆಗಳನ್ನು ಮಾಡಿರುವುದಾಗಿ ಲಿಖಿತವಾಗಿ ಒಪ್ಪಿಕೊಂಡಿದ್ದು, ಇನ್ನು ಮುಂದೆ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಯಾವುದೇ ರೀತಿಯ ಧಾರ್ಮಿಕ ಚಟುವಟಿಕೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಧಾರ್ಮಿಕ ಚಟುವಟಿಕೆಗಳ ಆಚರಣೆಯನ್ನು ಈಗ ನಿಷೇಧ ಮಾಡಿದೆ.
ತನಿಖಾ ವರದಿಯನ್ನು ಪರಿಶೀಲಿಸಿದ ನಂತರ ವಿದ್ಯಾರ್ಥಿಯು ಭವಿಷ್ಯದಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಧಾರ್ಮಿಕ ಚಟುವಟಿಕೆಯನ್ನು ಮಾಡಬಾರದು. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಸೂಚನೆ ನೀಡಿದ್ದು, ಒಂದು ವೇಳೆ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೆ, ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಕೋಮು ಉದ್ವಿಗ್ನತೆಯ ವಾತಾವರಣವನ್ನು ಸೃಷ್ಟಿಸುವ ಕೆಲಸಗಳಲ್ಲಿ ಭಾಗಿಯಾಗಬಾರದು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನೆ, ನಿವಾಸ ಅಥವಾ ಧಾರ್ಮಿಕ ಸ್ಥಳಗಳಲ್ಲಿ ಧರ್ಮಕ್ಕೆ ಸಂಬಂಧಿಸಿದ ಆಚರಣೆಗಳನ್ನು ಮಾಡಬೇಕು. ವಿಶ್ವವಿದ್ಯಾನಿಲಯದಲ್ಲಿ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ವಿವಿಯ ಕುಲಸಚಿವರು ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿ: ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಉದ್ಯೋಗ: ಗಾಂಜಾ ಮಾರಾಟಕ್ಕಿಳಿದು ಸಿಕ್ಕಿಬಿದ್ದ ಯುವತಿ