ನವದೆಹಲಿ: ದೇಶಾದ್ಯಂತ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸಲು ಅಂಚೆ ಇಲಾಖೆ ನಿರ್ಧರಿಸಿದೆ.
ಶಬರಿಮಲೆಯ ತಿರುವಾಂಕೂರು ದೇವಸ್ವಂ ಮಂಡಳಿಯು ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಸಿದ್ಧವಾದ ಪ್ರಸಾದವನ್ನು ಸ್ಪೀಡ್ ಪೋಸ್ಟ್ ಮೂಲಕ ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದೆ. ಈ ಹಿನ್ನೆಲೆ ಕೇರಳ ಅಂಚೆ ಇಲಾಖೆಯು ತಿರುವಾಂಕೂರು ದೇವಸ್ವಂ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಭಕ್ತರು ಭಾರತದ ಯಾವುದೇ ಅಂಚೆ ಕಚೇರಿಯಿಂದ ಸ್ವಾಮಿಯ ಪ್ರಸಾದವನ್ನು 450 ರೂ. (ಪ್ರತಿ ಪ್ಯಾಕೆಟ್) ಗಳನ್ನು ಪಾವತಿಸಿ ಪಡೆಯಬಹುದಾಗಿದೆ.
'ಸ್ವಾಮಿ ಪ್ರಸಾದಂ’ ಹೆಸರಿನ ಈ ಕಿಟ್‌ನಲ್ಲಿ ಒಂದು ಪ್ಯಾಕೆಟ್ ‘ಅರವಣ’ ಪಾಯಸ, ತುಪ್ಪ, ಅರಿಸಿಣ,–ಕುಂಕುಮ, ವಿಭೂತಿ ಹಾಗೂ ಅರ್ಚನೆಯ ಪ್ರಸಾದ ಇರಲಿದೆ. ಪ್ರಸಾದ ಕಾಯ್ದಿರಿಸಿದ ಗರಿಷ್ಠ ಹತ್ತು ದಿನಗಳ ಒಳಗೆ ಕಿಟ್ ಭಕ್ತರ ಕೈ ಸೇರಲಿದೆ.
ಪ್ರಸಾದವನ್ನು ಸ್ಪೀಡ್ ಪೋಸ್ಟ್ ಮೂಲಕ ಬುಕ್ ಮಾಡಿದ ತಕ್ಷಣ, ಪೋಸ್ಟ್ ಸಂಖ್ಯೆಯೊಂದಿಗೆ ಸಂದೇಶವನ್ನು ಕಳುಹಿಸಲಾಗುತ್ತದೆ. ಮತ್ತು ಎಸ್ಎಂಎಸ್ ಮೂಲಕ ಭಕ್ತರಿಗೆ ಮಾಹಿತಿ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಇಂಡಿಯಾ ಪೋಸ್ಟ್ ವೆಬ್‌ಸೈಟ್‌ಗೆ ಲಾಗಿನ್ ಆಗುವ ಮೂಲಕ ಭಕ್ತರು ಪ್ರಸಾದ ಎಲ್ಲಿಗೆ ಬಂದು ತಲುಪಿದೆ ಎಂದು ಟ್ರ್ಯಾಕ್ ಮಾಡಬಹುದು.
ಕೋವಿಡ್ 19 ಹಿನ್ನೆಲೆ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ದೇವಾಲಯಕ್ಕೆ ನಿರ್ಬಂಧ ಹೇರಲಾಗಿದ್ದು, ಅಂಚೆ ಇಲಾಖೆಯ ಈ ಕಾರ್ಯದಿಂದ ಭಕ್ತರು ಮನೆಯಲ್ಲಿಯೇ ದೇವರ ಪ್ರಸಾದವನ್ನು ಪಡೆಯಲು ಸುಲಭವಾಗಿದೆ.