ಪತ್ತನಂತಿಟ್ಟ/ಕೇರಳ:ಶಬರಿಮಲೆ ದೇವಸ್ಥಾನವು ಮಾಸಿಕ ಪೂಜೆಗಳಿಗಾಗಿ ಅಕ್ಟೋಬರ್ 16 ರಂದು ಸಂಜೆ 5 ಗಂಟೆಗೆ ಬಾಗಿಲು ತೆರೆಯಲಿದೆ. ದೇವಾಲಯದ ಬಾಗಿಲು ತೆರೆಯುವ ದಿನದಂದು ಯಾವುದೇ ಪೂಜೆಗಳು ಇರುವುದಿಲ್ಲ. ಆದರೆ, ಮಲಯಾಳಂ ತಿಂಗಳಾದ 'ತುಲಾ ಮಾಸಂ' ನ ಮೊದಲ ದಿನವಾದ ಅಕ್ಟೋಬರ್ 17 ರಿಂದ ನಿಯಮಿತ ಪೂಜೆಗಳು ಆರಂಭವಾಗುತ್ತವೆ.
ದೇವಸ್ಥಾನಕ್ಕೆ ಮುಖ್ಯ ಅರ್ಚಕರನ್ನು (ಮೇಲ್ಶಾಂತಿ ) ನೇಮಿಸುವ ಕಾರ್ಯ ಅಕ್ಟೋಬರ್ 17 ರಂದು ನಡೆಯಲಿದೆ. ಈಗಾಗಲೇ ಮುಖ್ಯ ಅರ್ಚಕರಾಗಿ ನೇಮಕಗೊಳ್ಳಲು ಒಂಬತ್ತು ಜನರು ಶಾರ್ಟ್‌ಲಿಸ್ಟ್ ಆಗಿದ್ದಾರೆ ಮತ್ತು ಪ್ರಧಾನ ಅರ್ಚಕರನ್ನು ಪಂತಲಮ್ ಅರಮನೆಯ ಮಕ್ಕಳ ಪ್ರತಿನಿಧಿಗಳು ಆಯ್ಕೆ ಮಾಡಲು ಈಗಾಗಲೇ ಸಾಕಷ್ಟು ಖರ್ಚು ಮಾಡಿದ್ದಾರೆ. ಪ್ರಧಾನ ಅರ್ಚಕರ ನೇಮಕ ಬಳಿಕ ಮಲಿಕಾಪುರಂ ಪ್ರಧಾನ ಅರ್ಚಕರ ನೇಮಕಾತಿ ಪ್ರಕ್ರಿಯೆ ಕೂಡ ನಡೆಯಲಿದೆ.
ಇನ್ನು ದೇವಾಲಯಕ್ಕೆ ವರ್ಚುಯಲ್ ಕ್ಯೂ ಸಿಸ್ಟಮ್ ಮೂಲಕ ತಮ್ಮ ಪ್ರವೇಶವನ್ನು ಕಾಯ್ದಿರಿಸಿದ ಭಕ್ತರನ್ನು ಮಾತ್ರ ಒಳಗೆ ಅನುಮತಿಸಲಾಗುತ್ತದೆ. ಅಕ್ಟೋಬರ್ 17 ರಿಂದ ಅಕ್ಟೋಬರ್ 21 ರವರೆಗೆ ಭಕ್ತರಿಗೆ ಅವಕಾಶ ನೀಡಲಾಗಿದೆ. ದರ್ಶನಕ್ಕಾಗಿ ನೋಂದಾಯಿಸಿಕೊಂಡಿರುವವರು ಎರಡು ಡೋಸ್ ಕೊರೊನಾ ಲಸಿಕೆ ಪ್ರಮಾಣಪತ್ರ ಅಥವಾ ಆರ್ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು.
ಅಕ್ಟೋಬರ್ 21 ರಂದು ದೇವಸ್ಥಾನವನ್ನು ಮುಚ್ಚಲಾಗುವುದು ಮತ್ತು ನವೆಂಬರ್ 2 ರಂದು 'ಅತ್ತ ಚಿತಿರೈ' ಹಬ್ಬಕ್ಕಾಗಿ ಮತ್ತೆ ತೆರೆಯಲಾಗುವುದು ಹಾಗೂ ನವೆಂಬರ್ 3 ರಂದು ಮುಚ್ಚಲಾಗುವುದು.