ಇಡುಕ್ಕಿ (ಕೇರಳ): ಆಂಧ್ರಪ್ರದೇಶ ಮೂಲದ ಇಬ್ಬರು ಶಬರಿಮಲೆ ಯಾತ್ರಾರ್ಥಿಗಳು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ಕರ್ನೂಲ್ನ ಆದಿ ನಾರಾಯಣನ್ ಮತ್ತು ಈಶ್ವರಪ್ಪ ಎಂದು ಗುರುತಿಸಲಾಗಿದೆ.
ಶಬರಿಮಲೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಗೆ ಇಡುಕ್ಕಿಯ ಪೆರುವಂತನಂನಲ್ಲಿ ಮೊದಲು ಸಣ್ಣ ಅಪಘಾತ ಸಂಭವಿಸಿತ್ತು. ಇದರಿಂದ ಬಸ್ಗೆ ಆದ ಹಾನಿಯನ್ನು ನೋಡುತ್ತಾ ಆದಿ ನಾರಾಯಣನ್ ಮತ್ತು ಈಶ್ವರಪ್ಪ ನಿಂತಿದ್ದರು. ಈ ವೇಳೆ, ವೇಗವಾಗಿ ಬಂದ ವಾಹನವೊಂದು ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಇವರಿಬ್ಬರಿಗೆ ಗುದ್ದಿದೆ. ಪರಿಣಾಮವಾಗಿ ಇವರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೃದಯಾಘಾತದಿಂದ ಯಾತ್ರಾರ್ಥಿ ನಿಧನ
ಮತ್ತೊಂದು ಘಟನೆಯಲ್ಲಿ, ಶಬರಿಮಲೆ ಅಯ್ಯಪ್ಪ ದೇವಾಲಯದಿಂದ ಮನೆಗೆ ತೆರಳುತ್ತಿದ್ದ 35 ವರ್ಷದ ಭಕ್ತರೊಬ್ಬರು ಮಂಗಳವಾರ ಬೆಳಗ್ಗೆ ಚೆಂಗನ್ನೂರು ರೈಲು ನಿಲ್ದಾಣದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶದ ಗುಂಟೂರು ಮೂಲದ ಶ್ರೀನಿವಾಸ ರಾವ್ ಎಂದು ಗುರುತಿಸಲಾಗಿದೆ.