ಹೈದರಾಬಾದ್ : ಶಿವಸೇನೆಯ ಮುಖವಾಣಿ ‘ಸಾಮ್ನಾ’ ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚನೆಯ ಬಳಿಕ ಬಿಜೆಪಿ ಸರ್ಕಾರವನ್ನ ಕಟುವಾಗಿ ಟೀಕಿಸುತ್ತಾ ಬಂದಿದೆ. ತನ್ನ ಸಂಪಾದಕೀಯ ಪುಟದಲ್ಲಿ ಕೇಂದ್ರದ ವಿರುದ್ಧ ಬರವಣಿಗೆ ರೂಪದಲ್ಲಿ ಟೀಕೆ ವ್ಯಕ್ತಪಡಿಸಿದೆ. ಜೊತೆಗೆ ಕೇಂದ್ರ ನೀತಿಗಳ ವಿರುದ್ಧ ಕಟು ಅಕ್ಷರದಲ್ಲಿ ಸಂಪಾದಕೀಯ ಮುದ್ರಿಸಿದೆ. ಆದರೆ, ಇದೀಗ ತನ್ನ ಪತ್ರಿಕೆಯಲ್ಲಿ ರಾಹುಲ್ ಗಾಂಧಿಯ ಕುರಿತು ಬರೆದಿದ್ದು, ಕುತೂಹಲ ಮೂಡಿಸಿದೆ.
ಕೇಂದ್ರಕ್ಕೆ ತರಾಟೆ
‘ರಾಹುಲ್ ಅವರ ಆರ್ಥಿಕತೆ’ ಎಂಬ ಟೈಟಲ್ನಲ್ಲಿ ದೇಶದ ಆರ್ಥಿಕತೆಯು ವಸಾಹತೀಕರಣಗೊಂಡಿದೆ ಮತ್ತು ಇದೇ ಪರಿಸ್ಥಿತಿ ಮುಂದುವರಿದರೆ, ಜನರ ಕೋಪವು ಸ್ಫೋಟಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದಿದೆ. 2014ರಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ಎಲ್ಪಿಜಿ ಬೆಲೆ ಪ್ರತಿ ಸಿಲಿಂಡರ್‌ಗೆ 410 ರೂ. ಇತ್ತು. ಆದರೆ, ಈಗ ಅದು 885 ರೂಪಾಯಿ ಎಂದು ರಾಹುಲ್ ಗಾಂಧಿ ಬುಧವಾರ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದರ ಬೆನ್ನಲ್ಲೆ ಸಾಮ್ನಾ ಸಂಪಾದಕೀಯದಲ್ಲಿ ಬಿಜೆಪಿಯನ್ನ ಟೀಕಿಸಿದೆ. ‘ಭಾರತೀಯ ಜನತಾ ಪಕ್ಷವು 10 ವರ್ಷಗಳ ಹಿಂದೆ ಹಣದುಬ್ಬರದ ವಿರೋಧಿ ಆಂದೋಲನವನ್ನು ಆರಂಭಿಸಿತ್ತು. ಹೇಮಾ ಮಾಲಿನಿ, ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ ಮತ್ತು ಬಿಜೆಪಿ ಮಹಿಳಾ ಮೋರ್ಚಾದ ಹಲವಾರು ಮಹಿಳೆಯರು ಖಾಲಿ ಸಿಲಿಂಡರ್‌ಗಳೊಂದಿಗೆ ರಸ್ತೆಗೆ ಇಳಿದಿದ್ದರು. ದೇಶದಲ್ಲಿ ಮಹಿಳೆಯರು ಹಣದುಬ್ಬರದಿಂದ ಬಳಲುತ್ತಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯ ಈ ಆಕ್ರಮಣಕಾರಿ ಮಹಿಳಾ ಮಂಡಲ ಈಗ ಎಲ್ಲಿ ಕುಳಿತಿದೆ? ಎಂದು ಪ್ರಶ್ನಿಸಿದೆ.
‘ನಿತೀಶ್ ಕುಮಾರ್ ಟೀಕಿಸುತ್ತಿದ್ದಾರೆ’
ಅಡುಗೆ ಅನಿಲ, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಮತ್ತು ಕಳೆದ 7 ವರ್ಷಗಳಲ್ಲಿ ಈ ವಸ್ತುಗಳ ಬೆಲೆ ಏರಿಕೆಯಿಂದ 23 ಲಕ್ಷ ಕೋಟಿ ರೂಪಾಯಿ ಗಳಿಸಲಾಗಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರವು ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು. ಸರ್ಕಾರವು ಜಿಡಿಪಿಯ ಹೊಸ ಪರಿಕಲ್ಪನೆಯನ್ನು ತಂದಿದೆ, ಇದರಲ್ಲಿ ಜಿಡಿಪಿಯಲ್ಲಿ ಏರಿಕೆ ಎಂದರೆ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಎಂದರ್ಥ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ ಎಂದು ಪತ್ರಿಕೆ ವಿವರಿಸಿದೆ.
ಅಲ್ಲದೆ, ಈ ಸರ್ಕಾರದ ಭಾಗವಾಗಿರುವ ನಿತೀಶ್ ಕುಮಾರ್ ಮತ್ತು ಅವರ 'ಜೆಡಿಯು' ಹಣದುಬ್ಬರದ ವಿರುದ್ಧ ಧ್ವನಿ ಎತ್ತಿದ್ದಾರೆ. ಹಣದುಬ್ಬರದ ಬಗ್ಗೆ ಜನರ ಆಕ್ರೋಶ ಮೋದಿ ಸರ್ಕಾರದ ಕಿವಿಗೆ ಬೀಳದಿದ್ದಾಗ, ನಿತೀಶ್ ಅವರ ದುರ್ಬಲ ಧ್ವನಿ ಹೇಗೆ ತಲುಪುತ್ತದೆ? ಆದಾಗ್ಯೂ, ಇವೆಲ್ಲವನ್ನೂ ಲೆಕ್ಕಿಸದೆ, ಮೋದಿ ಸರ್ಕಾರವು ದೇಶದ ಆರ್ಥಿಕತೆಯು ವೇಗಗೊಂಡಿದೆ ಎಂದು ಹೇಳುತ್ತದೆ ಎಂದು ಸಂಪಾದಕೀಯದಲ್ಲಿ ಲೇವಡಿ ಮಾಡಲಾಗಿದೆ.
ಓದಿ: ಕಾಬೂಲ್‌ನ ಭಾರತೀಯ ರಾಯಭಾರಿ ಕಚೇರಿ ಸೇಫ್; ಸಿಬ್ಬಂದಿಗೆ ವೇತನವೂ ಪಾವತಿಯಾಗ್ತಿದೆ!