ಅಹಮದಾಬಾದ್ : ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅಹಮದಾಬಾದ್ಗೆ ಆಗಮಿಸಿದ್ದಾರೆ. ಗುಜರಾತ್‌ನ ಮೂರು ರಾಜ್ಯಸಭಾ ಸ್ಥಾನಗಳಿಗೆ ಈ ತಿಂಗಳಾಂತ್ಯದಲ್ಲಿ ಚುನಾವಣೆ ನಡೆಯಲಿದೆ. ಉಳಿದ ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಬಿಜೆಪಿ ಸಂಸದೀಯ ಮಂಡಳಿ ಇನ್ನೂ ಅಂತಿಮಗೊಳಿಸಿಲ್ಲ.
ಗುಜರಾತ್‌ನ ಇತರೆ ಇಬ್ಬರು ರಾಜ್ಯಸಭಾ ಸದಸ್ಯರೊಂದಿಗೆ ಆಗಸ್ಟ್ 18ರಂದು ಎಸ್. ಜೈಶಂಕರ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಸುಮಾರಿಗೆ ರಾಜ್ಯಸಭಾ ಚುನಾವಣೆಗೆ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಗುಜರಾತ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ವಘೇಲಾ ಮಾಹಿತಿ ನೀಡಿದರು.
ಜೈಶಂಕರ್ ಅವರನ್ನು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಸಚಿವ ರಾಘವ್‌ಜಿ ಪಟೇಲ್, ಅಹಮದಾಬಾದ್ ಮೇಯರ್ ಕಿರಿತ್ ಪರ್ಮಾರ್ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಾಯಲ್ ಕುಕ್ರಾನಿ ಮತ್ತು ಪಕ್ಷದ ಇತರೆ ಕಾರ್ಯಕರ್ತರು ಬರಮಾಡಿಕೊಂಡರು. ಜುಲೈ 24ರಂದು ಚುನಾವಣೆ ನಡೆಯಲಿರುವ ಮೂರು ರಾಜ್ಯಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಅಧಿಕೃತವಾಗಿ ಘೋಷಿಸದೇ ಇದ್ದರೂ, ಎಸ್.ಜೈಶಂಕರ್ ಅವರ ನಾಮಪತ್ರ ಖಚಿತವಾಗಿತ್ತು.
ಗುಜರಾತ್‌ನ 11 ರಾಜ್ಯಸಭಾ ಸ್ಥಾನಗಳಲ್ಲಿ ಪ್ರಸ್ತುತ 8 ಬಿಜೆಪಿ ಮತ್ತು ಉಳಿದ 3 ಸ್ಥಾನಗಳು ಕಾಂಗ್ರೆಸ್ ವಶದಲ್ಲಿದೆ. ಬಿಜೆಪಿ ಹೊಂದಿರುವ ಎಂಟು ಸ್ಥಾನಗಳ ಪೈಕಿ ಎಸ್. ಜೈಶಂಕರ್, ಜುಗಲ್ಜಿ ಠಾಕೂರ್ ಮತ್ತು ದಿನೇಶ್ ಅನವಾಡಿಯಾ ಅವರ ಅವಧಿ ಆಗಸ್ಟ್ 18ರಂದು ಕೊನೆಗೊಳ್ಳಲಿದೆ. ಈ ಮೂರು ಸ್ಥಾನಗಳಿಗೆ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜುಲೈ 13 ಕೊನೆಯ ದಿನವಾಗಿದ್ದು, ಹಿಂಪಡೆಯಲು ಜುಲೈ 17 ಕೊನೆಯ ದಿನ. ಜುಲೈ 24ರಂದು ಚುನಾವಣೆಗೆ ಮತದಾನ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ : ಪ.ಬಂಗಾಳ ಪಂಚಾಯತ್ ಚುನಾವಣೆ: 690ಕ್ಕೂ ಹೆಚ್ಚು ಬೂತ್‌ಗಳಲ್ಲಿಂದು ಮರು ಮತದಾನ
ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ- ಕಾಂಗ್ರೆಸ್ : ಮೂರು ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜೈಶಂಕರ್ ಹೆಸರು ಹೊತರುಪಡಿಸಿ ಉಳಿದ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿಲ್ಲ. ಮತ್ತೊಂದೆಡೆ, ಸಾಕಷ್ಟು ಶಾಸಕರಿಲ್ಲದ ಕಾರಣ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಗುಜರಾತ್‌ನ 11 ರಾಜ್ಯಸಭಾ ಸ್ಥಾನಗಳ ಪೈಕಿ ಪ್ರಸ್ತುತ ಬಿಜೆಪಿ ಎಂಟು ಸ್ಥಾನಗಳನ್ನು ಹೊಂದಿದೆ. 182 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 156 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್ ಕೇವಲ 17 ಶಾಸಕರನ್ನು ಹೊಂದಿದೆ.