ನವದೆಹಲಿ : ರಷ್ಯಾದ ಕ್ಷಿಪಣಿ ನಿರೋಧಕ ವ್ಯವಸ್ಥೆಯಾದ ಎಸ್-400 ಅನ್ನು ಸ್ವಾಗತಿಸಲು ಭಾರತ ಸಜ್ಜಾಗಿದೆ. ಅಮೆರಿಕದ ನಿರ್ಬಂಧದ ಬೆದರಿಕೆ ಹಿನ್ನೆಲೆಯಲ್ಲಿಯೂ ರಷ್ಯಾದಿಂದ ಈ ಮಿಸೈಲ್ ಸಿಸ್ಟಮ್ ಖರೀದಿಗೆ ಮುಂದಾಗಿರುವುದನ್ನು ಭಾರತ ಸಮರ್ಥನೆ ಮಾಡಿಕೊಂಡಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್, ಭದ್ರತಾ ಸವಾಲುಗಳನ್ನು ಎದುರಿಸಲು ಹಾಗೂ ಬೇರೆ ದೇಶಗಳ ಬೆದರಿಕೆಯನ್ನು ಗ್ರಹಿಸಿ ದೇಶ ಸಾರ್ವಭೌಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಸಶಸ್ತ್ರ ಪಡೆಗಳನ್ನು ಎಲ್ಲಾ ಕಾಲಕ್ಕೂ ಸನ್ನದ್ಧವಾಗಿಡಬೇಕಿದೆ ಎಂದಿದ್ದಾರೆ.
ರಕ್ಷಣಾ ಉಪಕರಣಗಳ ಖರೀದಿಯ ಮೇಲೆ ಪರಿಣಾಮ ಬೀರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅರಿವಿದೆ ಎಂದಿರುವ ಅವರು, ಭಾರತವು ಈಗಾಗಲೇ ಸ್ಥಳೀಯ ಆ್ಯಂಟಿ-ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ವೈರಿ ಡ್ರೋನ್‌ಗಳನ್ನು ಪತ್ತೆ ಹಚ್ಚಲು, ಅವುಗಳ ವಿರುದ್ಧ ದಾಳಿ ಮಾಡಲು ಈ ಡ್ರೋನ್ ವ್ಯವಸ್ಥೆ ಸಮರ್ಥವಾಗಿದೆ ಎಂದಿದ್ದಾರೆ.
ಈಗ ಲಭ್ಯವಿರುವ ಮಾಹಿತಿ ಪ್ರಕಾರ ಅಮೆರಿಕ, ಇಸ್ರೇಲ್, ಫ್ರಾನ್ಸ್, ಯುಕೆ ಮತ್ತು ಜರ್ಮನಿ ಮಾತ್ರ ಆ್ಯಂಟಿ-ಡ್ರೋನ್ ವ್ಯವಸ್ಥೆ ಹೊಂದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ತಂತ್ರಜ್ಞಾನ ಆಧರಿಸಿ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ ಆ್ಯಂಟಿ-ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ಭಾರತೀಯ ಸಶಸ್ತ್ರ ಪಡೆಗಳಿಂದ ಬೇಡಿಕೆ ಇಡಲಾಗಿದೆ ಎಂದು ಅಜಯ್ ಭಟ್ ಹೇಳಿದ್ದಾರೆ.
ಡಿಆರ್‌ಡಿಒ ಆ್ಯಂಟಿ-ಡ್ರೋನ್ ವ್ಯವಸ್ಥೆಯ ತಂತ್ರಜ್ಞಾನವನ್ನು ಇನ್ನೂ ನಾಲ್ಕು ಖಾಸಗಿ ಕೈಗಾರಿಕೆಗಳಿಗೆ ವರ್ಗಾಯಿಸಿದೆ. ಈ ಮೂಲಕ ಡ್ರೋನ್ಗಳ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತದೆ ಎಂದು ಅವರು ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಎಸ್-400 ವಿಚಾರಕ್ಕೆ ಬರುವುದಾರೆ ರಷ್ಯಾ ನಿರ್ಮಿತ ಮಿಸೈಲ್ ವ್ಯವಸ್ಥೆಯನ್ನು ಭಾರತ ಖರೀದಿಸಲು ಮುಂದಾದರೆ ಅದು ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿದೆ. ಭಾರತದ ವಿರುದ್ಧ ಕಾಸ್ಟಾ (CAASTA) ನಿರ್ಬಂಧವನ್ನು ಪ್ರಯೋಗಿಸುವುದಾಗಿ ಅಮೆರಿಕ ಹೇಳಿಕೊಂಡಿತ್ತು.
ಇದನ್ನೂ ಓದಿ: ಜವಾದ್ ಚಂಡಮಾರುತ: ಆಂಧ್ರದಲ್ಲಿ 54 ಸಾವಿರ ಜನರ ಸ್ಥಳಾಂತರ