ಪಣಜಿ(ಗೋವಾ): ಕಾಲಿವುಡ್ನ 'ಕಾಂಚನಾ-3' ಸಿನಿಮಾದಲ್ಲಿ ನಟಿಸಿದ್ದ ನಟಿ, ರಷ್ಯಾದ ಅಲೆಕ್ಸಾಂಡ್ರಾ ಜಾವಿ ಅವರ ಆತ್ಮಹತ್ಯೆ ಪ್ರಕರಣವನ್ನು ಪೊಲೀಸರು ಬಗೆಹರಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಫೋಟೋಗ್ರಾಫರ್ ಓರ್ವ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಪತ್ತೆ ಹಚ್ಚಿದ್ದಾರೆ.
ಆಗಸ್ಟ್ 20ರಂದು ಉತ್ತರ ಗೋವಾದ ಶಿವೋಲಿಯ ಅಪಾರ್ಟ್ಮೆಂಟ್ವೊಂದರಲ್ಲಿ ಅಲೆಕ್ಸಾಂಡ್ರಾ ಜಾವಿ ಮೃತದೇಹ ದೊರೆತಿತ್ತು. ಈ ಕುರಿತು ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ತಮಿಳು ಸಿನಿಮಾಗೆ ಕೆಲಸ ಮಾಡುತ್ತಿದ್ದ ವೇಳೆ, ಆರೋಪಿ ಫೋಟೋಗ್ರಾಫರ್ ಕೂಡಾ ಆಕೆಯೊಂದಿಗೆ ಕೆಲಸ ಮಾಡುತ್ತಿದ್ದನು. ಈ ವೇಳೆ ಆತ ತನ್ನ ಬಳಿ ಅಲೆಕ್ಸಾಂಡ್ರಾ ಜಾವಿ ಅಶ್ಲೀಲ ಫೋಟೋಗಳಿರುವುದಾಗಿಯೂ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದಾನೆ. ಈ ಕುರಿತು ಜಾವಿ ಅವರು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಾದ ನಂತರ ಆರೋಪಿ ಫೋಟೋಗ್ರಾಫರ್ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಇದೇ ವಿಚಾರಕ್ಕೆ ಮಾನಸಿಕ ಆಘಾತಕ್ಕೆ ಒಳಗಾದ ನಟಿ, ಗೋವಾದ ಅಪಾರ್ಟ್ಮೆಂಟ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಗ ಆತ್ಮಹತ್ಯೆ ಪ್ರಕರಣದಲ್ಲೂ ಆತನ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ಶವವಾಗಿ ಪತ್ತೆಯಾದ 24 ವರ್ಷದ ನಟಿ.. ಇದು ಆತ್ಮಹತ್ಯೆಯೋ? ಕೊಲೆಯೋ?