ನವದೆಹಲಿ: ರಷ್ಯಾ ಮತ್ತು ಉಕ್ರೇನ್ ಯುದ್ಧ ಮುಂದುವರೆದಿರುವ ಬೆನ್ನಲ್ಲೇ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಭಾರತಕ್ಕೆ ಗುರುವಾರ(ನಾಳೆ) ಭೇಟಿ ನೀಡಲಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಏಪ್ರಿಲ್ 1ರ ತನಕ ಸೆರ್ಗೆ ಲಾವ್ರೋವ್ ಭಾರತದಲ್ಲಿ ಇರಲಿದ್ದು, ಈ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರೂ ಅಧಿಕಾರಿಗಳನ್ನು ಭೇಟಿ ಮಾಡಿ ರಷ್ಯಾ-ಉಕ್ರೇನ್ ಯುದ್ಧದ ಸ್ಥಿತಿಗತಿಯ ಬಗ್ಗೆ ಭಾರತದ ನಿಲುವಿನ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ. ಪ್ರಧಾನಿ ಮೋದಿ ಅವರನ್ನು ಸೆರ್ಗೆ ಲಾವ್ರೋವ್ ಭೇಟಿಯಾಗುವ ಬಗ್ಗೆ ಇನ್ನೂ ಮಾಹಿತಿ ಸ್ಪಷ್ಟವಾಗಿಲ್ಲ. ಭಾರತ ಮತ್ತು ಅಮೆರಿಕ ನಡುವೆ ಏಪ್ರಿಲ್ 11ರಂದು 2+2 ಮಾತುಕತೆ ನಡೆಯಲಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮಾತುಕತೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ರಷ್ಯಾ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ.
ಉಕ್ರೇನ್ ಮತ್ತು ರಷ್ಯಾ ಸಂಘರ್ಷದ ವಿಚಾರವಾಗಿ ಭಾರತ ತಟಸ್ಥ ನಿಲುವನ್ನು ಹೊಂದಿದ್ದು, ರಾಜತಾಂತ್ರಿಕ ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದೆ. ಇದರ ಜೊತೆಗೆ ಎರಡೂ ರಾಷ್ಟ್ರಗಳ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ವಿಶ್ವಸಂಸ್ಥೆಯ ನಿಯಮಗಳಿಗೆ ಬದ್ಧರಾಗಿರಬೇಕೆಂದು ಕರೆ ನೀಡಿದೆ.
ಇದನ್ನೂ ಓದಿ: ಬಿಮ್ಸ್ಟೆಕ್ಗೆ ಭಾರತದಿಂದ ಒಂದು ಮಿಲಿಯನ್ ಡಾಲರ್ ನೆರವು : ಪ್ರಧಾನಿ ಮೋದಿ