ಲಖನೌ(ಉತ್ತರಪ್ರದೇಶ): ಉಕ್ರೇನ್‌ನ ರಾಜಧಾನಿ ಕೀವ್ನಲ್ಲಿ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಸಿಲುಕಿದ್ದು, ಅಲ್ಲಿನ ನೈಜ ಚಿತ್ರಣವನ್ನು ವಿದ್ಯಾರ್ಥಿನಿ ವಿಡಿಯೋ ಮೂಲಕ ವಿವರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಗರಿಮಾ ಮಿಶ್ರಾ ಎಂಬ ವಿದ್ಯಾರ್ಥಿನಿ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಹೇಳುವುದರ ಜೊತೆಗೆ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಗರಿಮಾ ಲಖನೌದ ನಿವಾಸಿಯಾಗಿದ್ದಾರೆ. ನಾನು ಮತ್ತು ನನ್ನ ಸ್ನೇಹಿತರು ಕೀವ್ ನಗರದಲ್ಲಿ ಸಿಲುಕಿಕೊಂಡಿದ್ದೇವೆ.
ಸ್ವಲ್ಪ ಸಮಯದ ಹಿಂದೆ ನಾವು ಇಲ್ಲಿಂದ ರೈಲು, ಬಸ್ ಅಥವಾ ಕಾರಿನಿಂದ ಹೋಗೋಣ ಎಂದು ಯೋಚಿಸಿದ್ದೆವು. ಆದರೆ, ನನ್ನ ಕೆಲವು ಸ್ನೇಹಿತರು ಕಾರಿನ ಮೂಲಕ ಈಗಾಗಲೇ ಹೋಗಿದ್ದು, ಅವರನ್ನು ರಷ್ಯಾದ ಸೈನ್ಯವು ತಡೆದು ಅವರ ಮೇಲೆ ಗುಂಡು ಹಾರಿಸಿದೆ ಎನ್ನಲಾಗ್ತಿದೆ.
ಭಾರತೀಯ ಹುಡುಗಿಯರನ್ನು ಎಲ್ಲಿಗೋ ಕರೆದುಕೊಂಡು ಹೋಗಿದ್ದು, ಇನ್ನೊಂದೆಡೆ ರೊಮೇನಿಯನ್ ಸೈನ್ಯವು ನಮ್ಮನ್ನು ಕೊಲ್ಲುತ್ತಿದೆ ಎಂದು ವಿಡಿಯೋದಲ್ಲಿ ಗರಿಮಾ ಕಳವಳ ವ್ಯಕ್ತಪಡಿಸಿದ್ದಾರೆ.
ಯಾವುದೇ ಸಹಾಯ ಸಿಗುತ್ತಿಲ್ಲ: ನಮಗೆ ಇಲ್ಲಿ ಯಾರಿಂದಲೂ ಯಾವುದೇ ಸಹಾಯ ದೊರೆಯುತ್ತಿಲ್ಲ. ರಾಯಭಾರ ಕಚೇರಿಗೆ ನಿರಂತರವಾಗಿ ಕರೆ ಮಾಡಲಾಗುತ್ತಿದೆ. ಆದರೆ, ಯಾರೂ ಕರೆ ಸ್ವೀಕರಿಸುತ್ತಿಲ್ಲ. ಯೋಗಿಜೀ, ಮೋದಿ ಜೀ ನೀವು ನಮ್ಮನ್ನು ಉಳಿಸುತ್ತೀರಿ ಎಂದು ನಾವು ನಂಬಿದ್ದೇವೆ. ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಗರಿಮಾ ವಿಡಿಯೋದಲ್ಲಿ ವಿನಂತಿಸಿಕೊಂಡಿದ್ದಾರೆ.
ಉಕ್ರೇನ್ನಲ್ಲಿದ್ದಾರೆ ಯುಪಿಯ 1,100ಕ್ಕೂ ಹೆಚ್ಚು ನಾಗರಿಕರು : ಮಾಹಿತಿಯ ಪ್ರಕಾರ, ಉತ್ತರಪ್ರದೇಶದ ಸುಮಾರು 1,173 ನಾಗರಿಕರು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ ಎನ್ನಲಾಗ್ತಿದೆ. ಸರ್ಕಾರದ ಹೇಳಿಕೆಯನ್ನು ನಂಬುವುದಾದರೆ, ಎರಡು ವಿಮಾನಗಳ ಮೂಲಕ ಇಲ್ಲಿನ 66 ನಾಗರಿಕರನ್ನು ಸುರಕ್ಷಿತವಾಗಿ ಕರೆತರಲಾಗಿದೆ.
ಉಕ್ರೇನ್, ಪೋಲೆಂಡ್ ಮತ್ತು ರೊಮೇನಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮೂಲಕ ಎಲ್ಲಾ ರೀತಿಯ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯಕ್ಕೆ ಉಕ್ರೇನ್‌ನಲ್ಲಿ ಸಿಲುಕಿರುವ ಲಖನೌದ ಸುಮಾರು 19 ವಿದ್ಯಾರ್ಥಿಗಳ ಬಗ್ಗೆ ಮಾತ್ರ ಮಾಹಿತಿ ದೊರಕಿದೆ.
ಉಕ್ರೇನ್‌ನಲ್ಲಿ ಸಿಲುಕಿರುವ ಅಮ್ರೋಹಾದ ವಿದ್ಯಾರ್ಥಿನಿ: ಇದೇ ಸಮಯದಲ್ಲಿ, ರಾಜ್ಯದ ಅಮ್ರೋಹಾ ಜಿಲ್ಲೆಯ ಜೋಯಾ ನಿವಾಸಿ ವೈದ್ಯರ ಮಗಳು ಉಕ್ರೇನ್‌ನಿಂದ 29 ಸೆಕೆಂಡುಗಳ ವಿಡಿಯೋವನ್ನು ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡುತ್ತಿದ್ದಾರೆ. ಈ ವೇಳೆ, ವಿದ್ಯಾರ್ಥಿನಿ ಆಶಿಕಿ ಮಾತನಾಡಿ, ನಾವು ನಿರಂತರವಾಗಿ ಭಯಭೀತರಾಗಿದ್ದೇವೆ ಮತ್ತು ಪೊಲೀಸರು ಸಹ ವಿದ್ಯಾರ್ಥಿಗಳೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬೇಗ ನಮ್ಮನ್ನು ರಾಜ್ಯಕ್ಕೆ ಕರೆತರುವ ಪ್ರಯತ್ನ ಮಾಡಿ: ಖಾರ್ಕೀವ್‌ನಲ್ಲಿರುವ ಅಥಣಿ, ದಾವಣಗೆರೆ ವಿದ್ಯಾರ್ಥಿಗಳ ಮನವಿ
ಉಕ್ರೇನ್‌ನ ವಿನ್ನಿಟ್ಸಾ ನಗರದಲ್ಲಿ ಸಿಕ್ಕಿಬಿದ್ದಿರುವ ಕಾಸ್‌ಗಂಜ್‌ನ ಗರ್ವಿತಾ ಮಹೇಶ್ವರಿ ಈಟಿವಿ ಭಾರತಕ್ಕೆ ವಿಡಿಯೋ ಕರೆ ಮಾಡುವ ಮೂಲಕ ಪ್ರಸ್ತುತ ಅಲ್ಲಿನ ವಾಸ್ತವದ ಬಗ್ಗೆ ಮಾಹಿತಿ ನೀಡಿದ್ದಾರೆ.
ರಾಜ್ಯಮಟ್ಟದಲ್ಲಿ ವಿಪತ್ತು ನಿಯಂತ್ರಣ ಕೊಠಡಿ ಕಾರ್ಯ ನಿರ್ವಹಿಸುತ್ತಿದೆ. ವಿದೇಶದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳು ಟೋಲ್ ಫ್ರೀ ಸಂಖ್ಯೆ- (0522) 1070 ಮತ್ತು 94544-41081 ಮೂಲಕ ಸಂಪರ್ಕಿಸಬಹುದಾಗಿದೆ.