ನವದೆಹಲಿ: ಡಾಲರ್ ರೂಪಾಯಿ ಮೌಲ್ಯ ಭಾರೀ ಅಪಮೌಲ್ಯ ಕಂಡಿದೆ. ಎರಡು ದಿನಗಳ ಹಿಂದಷ್ಟೇ ಒಂದು ಡಾಲರ್ಗೆ 79.87 ಪೈಸೆ ಇದ್ದ ರೂಪಾಯಿ ಇಂದು 24 ಪೈಸೆ ಕುಸಿಯುವ ಮೂಲಕ ದಿಢೀರ್ ಆಗಿ 80.11 ಕ್ಕೆ ಇಳಿದಿದೆ. ಜೊತೆಗೆ ಭಾರತೀಯ ಷೇರುಪೇಟೆ ಕೂಡ ಆರಂಭಿಕ ವಹಿವಾಟಿನಲ್ಲಿ ತತ್ತರಿಸಿದ್ದು, 1309 ಪಾಯಿಂಟ್ ಕಳೆದುಕೊಂಡಿದೆ.
ಇಂದು ಬೆಳಗ್ಗೆ ವಹಿವಾಟು ಆರಂಭವಾದಾಗ ಅಂತರ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ ಬೆಲೆ ಅಮೆರಿಕ ಡಾಲರ್ ಎದುರು 79.87 ರೂಪಾಯಿ ಇತ್ತು. ಬಳಿಕ ಅದು ಮುಂದುವರಿದು 24 ಪೈಸೆ ಕುಸಿಯುವ ಮೂಲಕ 80 ರೂಪಾಯಿ ದಾಟಿತು.
ಷೇರುಪೇಟೆ ತಲ್ಲಣ: ಜಾಗತಿಕ ಮಟ್ಟದಲ್ಲಾದ ಬೆಳವಣಿಗೆಗಳಿಂದ ಭಾರತೀಯ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿತ ಕಂಡವು. ಬೆಳಗ್ಗೆ 9 ಗಂಟೆಗೆ ಆರಂಭವಾದ ಸೆನ್ಸೆಕ್ಸ್ ವಹಿವಾಟು ಆರಂಭಿಸಿದ ವೇಳೆ 1,309.60 ಪಾಯಿಂಟ್ ಅಂದರೆ ಶೇ.2.23 ರಷ್ಟು ಇಳಿಕೆ ಕಂಡಿತು. ಅದೇ ರೀತಿ ನಿಫ್ಟಿ 377 ಪಾಯಿಂಟ್ ಅಥವಾ ಶೇ.2.15 ರಷ್ಟು ಕುಸಿಯಿತು.
ಬಳಿಕದ ವಹಿವಾಟಿನಲ್ಲಿ ಕುಸಿತದ ಅಂತರವನ್ನು 778 ತಗ್ಗಿಸಿಕೊಂಡ ಸೆನ್ಸೆಕ್ಸ್ 58,055.15 ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಕೂಡ ಚೇತರಿಕೆ ಕಂಡು 227 ಪಾಯಿಂಟ್ ಕುಸಿತದೊಂದಿಗೆ 17,331 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ.