ನವದೆಹಲಿ: ದೆಹಲಿಯ ಆರ್‌ಟಿವಿ ಬಸ್ ಚಾಲಕರ ಗುಂಪು ಯುವಕನೊಬ್ಬನ ಮೇಲೆ ದಾಳಿ ಮಾಡಿ ಥಳಿಸಿದ್ದರಿಂದ ಆತ ಸಾವನ್ನಪ್ಪಿರುವ ಪ್ರಕರಣ ನಡೆದಿದೆ. ಪೊಲೀಸರು ಸಕಾಲಕ್ಕೆ ಸಹಾಯ ಮಾಡದ ಕಾರಣ ಸಾವು ಸಂಭವಿಸಿದೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತನನ್ನು ಸಾಹಿಲ್ ಮಲಿಕ್ (25) ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸಾಹಿಲ್ ಅವರ ಸಂಬಂಧಿ ಖಲೀಲ್ ಮಲಿಕ್, ವಿಶಾಲ್ ಮಲಿಕ್ ಜಿಮ್‌ನಿಂದ ಹಿಂತಿರುಗುತ್ತಿದ್ದಾಗ ಆರ್‌ಟಿವಿ ಬಸ್ ಚಾಲಕನೊಂದಿಗೆ ಯಾವುದೋ ವಿಷಯಕ್ಕೆ ಜಗಳವಾಗಿದೆ. 8 ರಿಂದ 10 ಜನರಿದ್ದ ಆರ್‌ಟಿವಿ ಬಸ್ ಚಾಲಕರು ವಿಶಾಲ್ನನ್ನು ಥಳಿಸಿದ್ದಾರೆ. ಈ ವೇಳೆ ವಿಶಾಲ್ ತನ್ನ ಬೈಕನ್ನು ಅಲ್ಲೇ ಬಿಟ್ಟು ಅವರಿಂದ ಪರಾರಿಯಾಗಿದ್ದಾನೆ.
ಬಳಿಕ ಆತ ನೇರವಾಗಿ ನಂಗ್ಲೋಯ್ ಪೊಲೀಸ್ ಠಾಣೆಗೆ ಹೋಗಿ, ನಡೆದ ಘಟನೆಯ ಬಗ್ಗೆ ದೂರಿದ್ದಾನೆ. ಅಲ್ಲದೆ ತನಗೆ ಸಹಾಯ ಮಾಡಲು ಪೊಲೀಸರನ್ನು ಕೋರಿದ್ದಾನೆ. ಆದರೆ, ಪೊಲೀಸರು ವಿಶಾಲ್ಗೆ ನೆರವು ನೀಡಿಲ್ಲ ಎಂದು ಖಲೀಲ್ ಆರೋಪಿಸಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ನಂತರ ವಿಶಾಲ್ ತನ್ನ ಸಹೋದರ ಸಾಹಿಲ್‌ಗೆ ಕರೆ ಮಾಡಿ ಅಲ್ಲಿಯೇ ಬಿಟ್ಟು ಬಂದ ಬೈಕ್ ತರುವಂತೆ ಹೇಳಿದ್ದಾನೆ. ಅದರಂತೆ ಸಾಹಿಲ್ ಬೈಕ್ ಇದ್ದ ಸ್ಥಳಕ್ಕೆ ಹೋದಾಗ ಆರ್‌ಟಿವಿ ಬಸ್ ಚಾಲಕರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಹರಿತವಾದ ವಸ್ತುವಿನಿಂದ ತಿವಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಮತ್ತು ತನಿಖೆ ಮುಂದುವರಿದಿದೆ.
ಇದಕ್ಕೂ ಮೊದಲು ಜನವರಿ 31 ರಂದು ದೆಹಲಿಯ ಓಖ್ಲಾದಲ್ಲಿ ಎರಡು ವಿದ್ಯಾರ್ಥಿ ಗುಂಪುಗಳ ನಡುವಿನ ಜಗಳದ ನಂತರ ಇಲ್ಲಿನ ಕಲ್ಕಾಜಿ ಶಾಲೆಯಲ್ಲಿ 12 ನೇ ತರಗತಿಯ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿತ್ತು. 18 ವರ್ಷದ ವಿದ್ಯಾರ್ಥಿ ಓಖ್ಲಾ ಪ್ರದೇಶದ ಎರಡನೇ ಹಂತದ ಜೆಜೆ ಕ್ಯಾಂಪ್‌ನ ನಿವಾಸಿ. ಹಂಸರಾಜ್ ಸೇಥಿ ಪಾರ್ಕ್ ಬಳಿ ವಿದ್ಯಾರ್ಥಿ ಗುಂಪುಗಳ ನಡುವೆ ಜಗಳ ನಡೆದಿತ್ತು. ಬಾಲಕನ ಎದೆಗೆ ಇರಿತದ ಗಾಯಗಳಾಗಿವೆ. ಆರೋಪಿಯ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದಿಲ್ಲಿಯಲ್ಲಿ ಶ್ರದ್ಧಾ ವಾಕರ್ ಮಾದರಿ ಹತ್ಯೆ: ದೆಹಲಿಯಲ್ಲಿ ಶ್ರದ್ಧಾ ವಾಕರ್ ಪ್ರಕರಣದಂತೆಯೇ ಮತ್ತೊಂದು ಕೇಸ್ ಬೆಳಕಿಗೆ ಬಂದಿದೆ. ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದ ಯುವತಿಯನ್ನು ಪ್ರೇಮಿಯೇ ಕೊಂದು ಆಕೆಯ ಶವವನ್ನು ಫ್ರಿಡ್ಜ್ನಲ್ಲಿಟ್ಟಿರುವ ಪ್ರಕರಣ ನಡೆದಿದೆ. ದೆಹಲಿ ಪೊಲೀಸರ ಅಪರಾಧ ವಿಭಾಗದ ತಂಡವು ಪಶ್ಚಿಮ ದೆಹಲಿಯ ಹರಿದಾಸ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಢಾಬಾದಿಂದ ಯುವತಿಯ ಶವ ವಶಪಡಿಸಿಕೊಳ್ಳಲಾಗಿದೆ.
ಯುವತಿಯ ಮೃತ ದೇಹವನ್ನು ಢಾಬಾದ ಫ್ರಿಡ್ಜ್ನಲ್ಲಿ ಇರಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಮಿತ್ರಾನ್ ಗ್ರಾಮದ ನಿವಾಸಿ ಸಾಹಿಲ್ ಗೆಹ್ಲೋಟ್ ಎಂದು ಗುರುತಿಸಲಾಗಿದೆ.
ಓದಿ: ಗಾಯಗೊಂಡಿದ್ದ ತಾಯಿ ಹುಲಿ ಸೆರೆ: ಚಿಕಿತ್ಸೆಗಾಗಿ ಮೈಸೂರಿಗೆ ಸ್ಥಳಾಂತರ