ಥಾಣೆ (ಮಹಾರಾಷ್ಟ್ರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಹೂಡಿರುವ ಮಾನನಷ್ಟ ಮೊಕದ್ದಮೆ ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 22ಕ್ಕೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ನ್ಯಾಯಾಲಯ ಮುಂದೂಡಿದೆ.
2014ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಭಿವಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ್ದ ಆರ್ಎಸ್ಎಸ್ನವರು ಎಂದು ಹೇಳಿಕೆ ನೀಡಿದ್ದರು.
ಇದನ್ನು ಖಂಡಿಸಿ ಆರ್ಎಸ್ಎಸ್ನ ರಾಜೇಶ್ ಕುಂಟೆ ಅವರು ರಾಹುಲ್ ಗಾಂಧಿ ವಿರುದ್ಧ ಭಿವಂಡಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ರಾಹುಲ್ ಗಾಂಧಿ ಅವರ ಹೇಳಿಕೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಕಳಂಕ ತಂದಿದೆ ಎಂದು ರಾಜೇಶ್ ಕುಂಟೆ ಆರೋಪಿಸಿದ್ದರು.
ಇದನ್ನೂ ಓದಿ: ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಆಗ್ರಹಿಸಿ ರಾಜ್ಯಸಭೆಯಿಂದ ಹೊರನಡೆದ TRS ಸಂಸದರು
ಇಂದು ಪ್ರಕರಣದ ವಿಚಾರಣೆಯನ್ನು ಭಿವಂಡಿ ಕೋರ್ಟ್ ನಡೆಸಿದ್ದು, ರಾಜೇಶ್ ಕುಂಟೆ ಹಾಜರಾಗಿದ್ದರು. ಪಂಚರಾಜ್ಯಗಳ ಚುನಾವಣೆಯಲ್ಲಿ ರಾಹುಲ್ ಗಾಂಧಿ ನಿರತರಾಗಿರುವ ಕಾರಣ ಅವರು ಗೈರುಹಾಜರಾಗಿದ್ದರು. ಮುಂದಿನ ವಿಚಾರಣೆ ಫೆಬ್ರವರಿ 22 ರಂದು ನಡೆಯಲಿದೆ.