ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಇಂದಿನಿಂದ ನಾಲ್ಕು ದಿನಗಳ ಕಾಲ ಜಮ್ಮು ಪ್ರವಾಸ ಕೈಗೊಂಡಿದ್ದಾರೆ. ಆರ್ಟಿಕಲ್ 370 ಮತ್ತು 35ಎ ವಿಧಿ ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಆರ್ಎಸ್ಎಸ್ ಮುಖ್ಯಸ್ಥರು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ.
ಅಕ್ಟೋಬರ್ 2ರಂದು ಜಮ್ಮು ವಿಶ್ವವಿದ್ಯಾಲಯದ ಜೋರವಾರ್ ಸಿಂಗ್ ಸಭಾಭವನದಲ್ಲಿ ಕಾರ್ಯಾಗಾರ ಉದ್ದೇಶಿಸಿ ಭಾಗವತ್ ಭಾಷಣ ಮಾಡಲಿದ್ದಾರೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಎಸ್ಎಸ್ ಕೈಗೊಂಡಿರುವ ಕಾರ್ಯಗಳ ಪರಿಶೀಲನೆ ಮಾಡಲಿದ್ದಾರೆ. ಆ ಬಳಿಕ ಅ.3ರಂದು ಜಮ್ಮು ಮತ್ತು ಕಾಶ್ಮೀರದ ಆರ್ಎಸ್ಎಸ್ ಪ್ರಚಾರಕ್ ಉದ್ದೇಶಿಸಿ ವರ್ಚುವಲ್ ಸಭೆ ನಡೆಸುತ್ತಾರೆ.
ಈ ಮೊದಲು ಆರ್ಟಿಕಲ್ 370 ಮತ್ತು ವಿಶೇಷ ಸ್ಥಾನಮಾನ ರದ್ದುಪಡಿಸಿದ್ದ ಸರ್ಕಾರದ ನಡೆಯನ್ನು ಆರ್ಎಸ್ಎಸ್ ಸ್ವಾಗತಿಸಿತ್ತು. ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಈ ಕುರಿತು ಹೇಳಿಕೆ ನೀಡಿ, ರಾಷ್ಟ್ರದ ಏಕೀಕರಣ ಇದೀಗ ಪೂರ್ಣಗೊಂಡಿದೆ. ಭಾರತ ಸಂವಿಧಾನವು ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಅನ್ವಯಿಸಬೇಕು ಎಂಬುದು ಎಲ್ಲರ ಉದ್ದೇಶವಾಗಿತ್ತು. ಈ ಉದ್ದೇಶ ಈಗ ನೆರವೇರಿದೆ ಎಂದಿದ್ದರು.
ಇದನ್ನೂ ಓದಿ: ನಾನವನಲ್ಲ.. ನನಗೆ ಟ್ಯಾಗ್ ಮಾಡುವುದು ದಯವಿಟ್ಟು ನಿಲ್ಲಿಸಿ: ಗೋಲ್ಕೀಪರ್ 'ಅಮರೀಂದರ್ ಸಿಂಗ್' ಮನವಿ