ನವದೆಹಲಿ: ಭಾರತೀಯ ಜನತಾ ಪಕ್ಷ ಮತ್ತು ಅದರ ಸೈದ್ಧಾಂತಿಕ ಮೂಲ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಜನವರಿ 5 ರಿಂದ ಜನವರಿ 7 ರವರೆಗೆ ಅಹಮದಾಬಾದ್‌ನಲ್ಲಿ ಸಮನ್ವಯ ಸಭೆ ಸಡೆಸಲಿವೆ.
ಪಶ್ಚಿಮ ಬಂಗಾಳ ಚುನಾವಣೆ ಉದ್ದೇಶವಾಗಿಟ್ಟುಕೊಂಡು ಈ ಸಭೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಸಭೆಯ ಅಧ್ಯಕ್ಷತೆಯನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಹಿಸಲಿದ್ದು, ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅದರ ಅಂಗಸಂಸ್ಥೆಗಳ ಇತರ ಹಿರಿಯ ಕಾರ್ಯಕರ್ತರು ಕೂಡ ಹಾಜರಿರಲಿದ್ದಾರೆ.
ಜೆಪಿ ನಡ್ಡಾ ಎರಡು ದಿನಗಳ ಕಾಲ ಅಹಮದಾಬಾದ್ಗೆ ತೆರಳಲಿದ್ದು, ಅವರು ಮೊದಲ ದಿನ ಆರ್‌ಎಸ್‌ಎಸ್ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಮತ್ತು ಮರುದಿನ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಡ್ಡಾ ಜನವರಿ 7 ರಂದು ಅಹಮದಾಬಾದ್‌ನಿಂದ ಹೊರಡುವ ಸಾಧ್ಯತೆ ಇದೆ. ಸಭೆಯಲ್ಲಿ ಕೆಲವು ಕೇಂದ್ರ ಸಚಿವರು ಕೂಡ ಭಾಗವಹಿಸಲಿದ್ದಾರೆ. ಸರ್ಕಾರದ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ಸಭೆ ಇದಾಗಿರುವುದರಿಂದ, ಮಂತ್ರಿಗಳು ಸಹ ಭಾಗವಹಿಸುತ್ತಾರೆ ಮತ್ತು ಮುಂಬರುವ ವರ್ಷಗಳಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ರೈತರ ಪ್ರತಿಭಟನೆ ಮತ್ತು ಕೃಷಿ ಮಸೂದೆಗಳು, ಪಶ್ಚಿಮ ಬಂಗಾಳ, ಅಸ್ಸೋಂ, ಕೇರಳ, ತಮಿಳುನಾಡು ಮುಂತಾದ ರಾಜ್ಯಗಳ ಚುನಾವಣೆಗಳು ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.