ನವದೆಹಲಿ: ಯುಕೋ ಬ್ಯಾಂಕ್‌ನ ವಿವಿಧ ಖಾತೆದಾರರಿಗೆ 820 ಕೋಟಿ ರೂಪಾಯಿಯನ್ನು ತಪ್ಪಾಗಿ ಜಮೆ ಮಾಡಲಾಗಿದೆ. ಈ ಹಣವನ್ನು ಮರುಪಡೆದುಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ. ತಕ್ಷಣದ ಪಾವತಿ ಸೇವೆ (IMPS) ಮೂಲಕ ಬ್ಯಾಂಕ್‌ನ ಕೆಲವು ಖಾತೆಗಳಿಗೆ ಹೀಗೆ ಜಮೆಯಾದ ಹಣದಲ್ಲಿ 649 ಕೋಟಿ ರೂಪಾಯಿಯನ್ನು (ಶೇ 79ರಷ್ಟು) ಈಗಾಗಲೇ ಬ್ಯಾಂಕ್ ಹಿಂಪಡೆದುಕೊಂಡಿದೆ.
ವಿವಿಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ತಪ್ಪಾಗಿ ಹಣ ಜಮೆಯಾದ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಇದರಿಂದಾಗಿ 820 ಕೋಟಿ ರೂ.ಗಳ ಪೈಕಿ 649 ಕೋಟಿ ರೂ.ಗಳನ್ನು ಮರುಪಡೆಯಲು ಸಾಧ್ಯವಾಯಿತು. ಸುಮಾರು ಶೇ 79 ದಷ್ಟು ಮೊತ್ತವನ್ನು ಶೀಘ್ರವೇ ಹಿಂಪಡೆಯಲಾಗಿದೆ ಎಂದು ಯುಕೋ ಬ್ಯಾಂಕ್ ತಿಳಿಸಿದೆ.
ಬೇರೆ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದಕ್ಕೆ ತಾಂತ್ರಿಕ, ಮಾನವ ದೋಷ ಅಥವಾ ಹ್ಯಾಕಿಂಗ್ ಕಾರಣವೇ ಎನ್ನುವುದನ್ನು ಬ್ಯಾಂಕ್ ಸ್ಪಷ್ಟಪಡಿಸಿಲ್ಲ. ತಕ್ಷಣದ ಪಾವತಿ ಸೇವೆಯ ಪ್ಲಾಟ್‌ಫಾರ್ಮ್ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನಿರ್ವಹಿಸುತ್ತದೆ. ಐಎಂಪಿಎಸ್ ಒಂದು ನೈಜ-ಸಮಯದ ಅಂತರಬ್ಯಾಂಕ್ ಎಲೆಕ್ಟ್ರಾನಿಕ್ ಹಣ ವರ್ಗಾವಣೆ ವ್ಯವಸ್ಥೆಯಾಗಿದ್ದು, ಇದು ಯಾರ ಹಸ್ತಕ್ಷೇಪವಿಲ್ಲದೆಯೂ ನೇರವಾಗಿ ಹಣ ವರ್ಗಾವಣೆ ಕಲ್ಪಿಸುತ್ತದೆ.
ಇನ್ನುಳಿದ 171 ಕೋಟಿ ರೂ ಬಾಕಿ ಮೊತ್ತವನ್ನು ಮರುಪಡೆಯಲು ಬ್ಯಾಂಕ್ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕಾನೂನು ಜಾರಿ ಸಂಸ್ಥೆಗಳಿಗೆ ಈ ಕುರಿತು ವರದಿ ನೀಡಿದೆ. ಗ್ರಾಹಕರ ಖಾತೆಗಳಿಗೆ ತಪ್ಪಾಗಿ ಹಣ ವರ್ಗಾವಣೆ ಮಾಡಿದ ಬಳಿಕ ಬ್ಯಾಂಕ್ನಿಂದ ಸಿಬಿಐಗೆ ದೂರು ನೀಡಲಾಗಿದೆ ಎಂದು ಯುಕೊ ಬ್ಯಾಂಕ್ ಮಾಹಿತಿ ನೀಡಿದೆ.
ತಪ್ಪಾಗಿ ಹಣ ವರ್ಗಾವಣೆಯಾದ ಘಟನೆಗಳು ನ.10 ಹಾಗೂ ನ.13ರ ನಡುವೆ ಸಂಭವಿಸಿವೆ. ಹಣ ಜಮೆಯಾದ ಖಾತೆಗಳಿಂದ ವ್ಯವಹಾರ ನಡೆಯದಂತೆ ಬುಧವಾರ ತಡೆಹಿಡಿಯಲಾಗಿದೆ. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಐಎಂಪಿಎಸ್ ಅನ್ನು ಆಫ್‌ಲೈನ್‌ನಲ್ಲಿ ಮುಂದುವರಿಸಲಾಗಿದೆ. ಸಾಧ್ಯವಾದಷ್ಟು ಬೇಗ ಸಮಸ್ಯೆ ಪರಿಹರಿಸಲು ಮತ್ತು ಐಎಂಪಿಎಸ್ ಸೇವೆಗಳನ್ನು ಮರುಸ್ಥಾಪಿಸಲು ಮಧ್ಯಸ್ಥಗಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಬ್ಯಾಂಕ್ ತಿಳಿಸಿದೆ.
ಯುಕೋ ಬ್ಯಾಂಕ್ ವ್ಯವಸ್ಥೆಯ ಮೇಲೆ ಸೈಬರ್ ದಾಳಿಯಾಗಿರಬಹುದು ಎಂದು ಕೆಲವು ಬ್ಯಾಂಕರ್‌ಗಳು ಹೇಳಿದ್ದಾರೆ. ನಿನ್ನೆ (ಗುರುವಾರ) ನಡೆದ ಷೇರು ಮಾರುಕಟ್ಟೆಯಲ್ಲಿ ಬ್ಯಾಂಕಿನ ಪ್ರತಿ ಷೇರಿನ ಬೆಲೆ 39.22 ರೂ.ಗೆ ಮುಕ್ತಾಯಗೊಂಡಿದೆ. ಬಿಎಸ್‌ಇಯಲ್ಲಿ ಶೇ 1.53 ರಷ್ಟು ಇಳಿಕೆ ಕಂಡಿದೆ.
ಯುಕೋ ಬ್ಯಾಂಕ್ ನಿವ್ವಳ ಲಾಭ ಶೇ 20ರಷ್ಟು ಕುಸಿತ: ಯುಕೋ ಬ್ಯಾಂಕ್ ತನ್ನ ನಿವ್ವಳ ಲಾಭದಲ್ಲಿ ಶೇ 20ರಷ್ಟು ಕುಸಿತ ಕಂಡಿರುವ ಬಗ್ಗೆ ವರದಿ ಮಾಡಿದೆ. ಸೆಪ್ಟೆಂಬರ್ 2023ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 402 ಕೋಟಿ ರೂ. ಲಾಭ ಗಳಿಸಿದೆ. ಆದರೆ, ವರ್ಷದ ಹಿಂದಿನ ತ್ರೈಮಾಸಿಕದಲ್ಲಿ 505 ಕೋಟಿ ರೂ. ಲಾಭ ಗಳಿಸಿತ್ತು. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಕೋಲ್ಕತ್ತಾದ ಪ್ರಧಾನ ಕಚೇರಿಯ ಒಟ್ಟು ಆದಾಯವು ಹಿಂದಿನ ವರ್ಷದ ಅವಧಿಯಲ್ಲಿ 4,965 ಕೋಟಿ ರೂಪಾಯಿಗಳಿಂದ 5,866 ಕೋಟಿ ರೂಪಾಯಿಗಳಿಗೆ ಏರಿಕೆ ಕಂಡಿದೆ.
ಇದನ್ನೂ ಓದಿ: ಕೇರಳ ನರ್ಸ್ಗೆ ಯೆಮೆನ್ನಲ್ಲಿ ಮರಣದಂಡನೆ: ವಿನಾಯಿತಿ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್