ಕೋಲ್ಕತ್ತಾ: ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿನ ಸಾರಿಗೆ ಉದ್ಯಮಿಯೊಬ್ಬರ ನಿವಾಸದ ಮೇಲೆ ಶನಿವಾರ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಇಡಿ) ಭಾರಿ ಮೊತ್ತದ ನಗದನ್ನು ವಶಪಡಿಸಿಕೊಂಡಿದೆ. ಆರೋಪಿ ನಿಸಾರ್ ಖಾನ್ ಮನೆಯಿಂದ ಈವರೆಗೆ 7 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಆರೋಪಿಯ ಮನೆಯಲ್ಲಿ ಸಿಕ್ಕ ಹಣವನ್ನು ನೋಡಿ ದಂಗಾದ ಇಡಿ ಅಧಿಕಾರಿಗಳು ಅದನ್ನು ಎಣಿಸುವಷ್ಟರಲ್ಲಿ ಸುಸ್ತಾದರು. ಹೀಗಾಗಿ ಹತ್ತಿರದ ಬ್ಯಾಂಕೊಂದರಿಂದ ನೋಟು ಕೌಂಟಿಂಗ್ ಮಶಿನ್ ತರಿಸಿ ಹಣ ಎಣಿಸಲಾಯಿತು.
ಇದುವರೆಗೆ ಖಾನ್ ನಿವಾಸದಿಂದ 7 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಇಡಿ ಅಧಿಕಾರಿಗಳ ತಂಡವು ಇಂದು ಬೆಳಗ್ಗೆ ಗಾರ್ಡನ್ ರೀಚ್‌ನ ಸಾಹಿ ಅಸ್ತಾಬಲ್ ಪ್ರದೇಶದಲ್ಲಿರುವ ಖಾನ್ ಅವರ ನಿವಾಸಕ್ಕೆ ಬಂದಿತ್ತು. ಖಾನ್ ನಿವಾಸವನ್ನು ತಲುಪಿದ ನಂತರ ಖಾನ್ರಿಗೆ ಇಡಿ ಅಧಿಕಾರಿಗಳು ಹಲವಾರು ಬಾರಿ ಕರೆ ಮಾಡಿದರೂ ಆತ ಕರೆ ಸ್ವೀಕರಿಸಲಿಲ್ಲ ಎಂದು ಇಡಿ ಅಧಿಕಾರಿಗಳು ಹೇಳಿದರು.
ಸ್ವಲ್ಪ ಸಮಯದ ನಂತರ ವೃದ್ಧರೊಬ್ಬರು ಮನೆಯೊಳಗಿಂದ ಬಂದು ಬಾಗಿಲು ತೆರೆದರು. ಖಾನ್ ಅವರ ಹಾಸಿಗೆಯ ಕೆಳಗೆ ಇರಿಸಲಾಗಿದ್ದ ಟ್ರಂಕ್‌ನಲ್ಲಿ ನಗದು ಪತ್ತೆಯಾಗಿದೆ. ಆನ್‌ಲೈನ್ ಗೇಮಿಂಗ್ ವಂಚನೆಯ ಮೂಲಕ ಖಾನ್ ಈ ಹಣ ಸಂಗ್ರಹಿಸಿದ್ದಾರೆಂಬುದು ಪ್ರಾಥಮಿಕವಾಗಿ ತೋರುತ್ತದೆ ಎಂದು ಇಡಿ ಮೂಲಗಳು ತಿಳಿಸಿವೆ.
ಗಾರ್ಡನ್ ರೀಚ್‌ನಲ್ಲಿನ ದಾಳಿಯು ಬೆಳಗ್ಗೆ ಇಡಿ ನಡೆಸಿದ ಮೂರು ದಾಳಿಗಳ ಭಾಗವಾಗಿದೆ. ಇನ್ನೆರಡು ದಾಳಿಗಳು ನಗರದ ಪಾರ್ಕ್ ಸ್ಟ್ರೀಟ್ ಮತ್ತು ಮೊಮಿನ್‌ಪೋರ್ ಪ್ರದೇಶದಲ್ಲಿ ನಡೆದಿವೆ. ಇಡಿ ಅಧಿಕಾರಿಗಳ ಮೂರು ತಂಡಗಳು ಶನಿವಾರ ಕೋಲ್ಕತ್ತಾದ ಪೂರ್ವ ಭಾಗದಲ್ಲಿರುವ ಸಾಲ್ಟ್ ಲೇಕ್‌ನಲ್ಲಿರುವ ಸಿಜಿಒ ಕಾಂಪ್ಲೆಕ್ಸ್‌ನಿಂದ ಹೊರಟು, ಒಂದು ತಂಡ ಗಾರ್ಡನ್ ರೀಚ್‌ಗೆ ಹಾಗೂ ಇನ್ನೆರಡು ತಂಡಗಳು ಪಾರ್ಕ್ ಸ್ಟ್ರೀಟ್ ಮತ್ತು ಮೊಮಿನ್‌ಪೋರ್ ಗೆ ತೆರಳಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ದಾಳಿ ನಡೆಸಿದವು.
ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಮಯೂರ್‌ಭಂಜ್ ರಸ್ತೆಯಲ್ಲಿರುವ ಜವಳಿ ಉದ್ಯಮಿಯೊಬ್ಬರ ನಿವಾಸ ಮತ್ತು ಬಿಂದು ಬಾಸಿನಿ ಸ್ಟ್ರೀಟ್‌ನಲ್ಲಿರುವ ಅವರ ಇನ್ನೊಂದು ನಿವಾಸದ ಮೇಲೆ ದಾಳಿಗಳು ಸದ್ಯ ಜಾರಿಯಲ್ಲಿವೆ.
ಇದನ್ನು ಓದಿ:ಖಾಲಿ ಸೈಟ್ಗೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ಗಳಿಗೆ ವಂಚನೆ: ಡುಪ್ಲಿಕೇಟ್ ನರಸಯ್ಯ ಸೇರಿ ಮೂವರ ಬಂಧನ