ರಜೌರಿ(ಜಮ್ಮು ಮತ್ತು ಕಾಶ್ಮೀರ): ಕಾರ್ಯಾಚರಣೆಯೊಂದರ ವೇಳೆ ಪರಾರಿಯಾಗಿದ್ದ ಅಪರಾಧಿಗೆ ಸೇರಿದ ಬ್ಯಾಗ್ನಲ್ಲಿದ್ದ ಸುಮಾರು 1.64 ಕೋಟಿ ರೂಪಾಯಿಯನ್ನು ಜಮ್ಮು ಕಾಶ್ಮೀರದ ಪೊಲೀಸರು ಮತ್ತು ಭದ್ರತಾ ಪಡೆಗಳು ಜಪ್ತಿ ಮಾಡಿವೆ.
ಖಚಿತ ಮಾಹಿತಿಯನ್ನು ಆಧರಿಸಿ, ರಜೌರಿ ಜಿಲ್ಲಾ ಪೊಲೀಸರು ಮತ್ತು ಸೇನೆ ಮಂಗಳವಾರ ಸರಯಾ ಗ್ರಾಮದಲ್ಲಿ ಜಂಟಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಪ್ರಕರಣವೊಂದರಲ್ಲಿ ಅಪರಾಧಿಯಾಗಿದ್ದ ಗುಲ್ಜಾರ್ ಹುಸೇನ್ ಎಂಬಾತನ ಮಗ ಮಂಜೂರ್ ಅಹ್ಮದ್ಗೆ ಸೇರಿದ್ದ ಬ್ಯಾಗ್ ಪತ್ತೆಯಾಗಿದೆ.
ಬ್ಯಾಗ್ ಅನ್ನು ಪರಿಶೀಲನೆ ನಡೆಸಿದ ಜಮ್ಮು ಕಾಶ್ಮೀರದ ಪೊಲೀಸರು ಮತ್ತು ಭದ್ರತಾ ಪಡೆಗಳು ಸುಮಾರು 1,64,70, 600 ರೂಪಾಯಿಯನ್ನು ಜಪ್ತಿ ಮಾಡಿವೆ.
ಮಂಜೂರ್ ಅಹ್ಮದ್ ವಿರುದ್ಧ ನೌಶೇರಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 17 (ಭಯೋತ್ಪಾದಕ ಕೃತ್ಯಕ್ಕೆ ಹಣ ಸಂಗ್ರಹಿಸಿದ ಶಿಕ್ಷೆ) ಮತ್ತು 21 (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಂಜಾಬ್ನ ಕಾತು ನಂಗಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡ ಸಿಕಂದರ್ ಎಂಬಾತನನ್ನು ಬಂಧಿಸಿದ್ದು, ಮಂಜೂರ್ ಅಹ್ಮದ್ ಸಿಕಂದರ್ನ ಸಂಬಂಧಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಮಳೆಯ ಆರ್ಭಟ: ಜನಜೀವನ ಅಸ್ತವ್ಯಸ್ತ