ನವದೆಹಲಿ: ಭಾರತೀಯ ರೈಲ್ವೆಯು ದೇಶದ ಜನತೆಯ ಜೀವನಾಡಿಯಾಗಿದೆ. ದೇಶದ ಮೂಲೆ ಮೂಲೆಗೆ ರೈಲ್ವೆ ಹಬ್ಬಿಕೊಂಡಿದೆ. ಕಡಿಮೆ ವೆಚ್ಚದ ಪ್ರಯಾಣ, ಸುರಕ್ಷಿತ ಮತ್ತು ವೇಗದ ಪ್ರಯಣದ ಕಾರಣಕ್ಕಾಗಿ ಕೋಟ್ಯಂತರ ಜನರು ರೈಲ್ವೆಯ ಮೇಲೆಯೇ ಅವಲಂಬಿತರಾಗಿದ್ದಾರೆ. ಅದರಲ್ಲೂ, ನಿತ್ಯವೂ ಸಾಮಾನ್ಯ ಪ್ರಯಾಣಿಕರು, ಉದ್ಯೋಗಿಗಳು, ನೌಕಕರು, ಕೂಲಿ ಕಾರ್ಮಿಕರು ಮತ್ತು ಪ್ರವಾಸಿಗರು.. ಹೀಗೆ ಅನೇಕ ವರ್ಗದ ಜನ ತಮ್ಮ ಕೆಲಸ ಕಾರ್ಯಗಳಿಗೆ ರೈಲ್ವೆಯನ್ನು ಬಳಕೆ ಮಾಡುತ್ತಾರೆ. ಆದರೆ, ರೈಲಿನಲ್ಲಿ ಸಂಚರಿಸುವಾಗ ಸಾಮಾನ್ಯವಾಗಿ ಒಂದಲ್ಲ, ಒಂದು ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ತೃತೀಯ ಲಿಂಗಗಳ ಉಪದ್ರವ ತಟ್ಟಿರುತ್ತದೆ. ಅಂತಹದ್ದಕ್ಕೆ ಕಡಿವಾಣ ಹಾಕಲು ರೈಲ್ವೆ ರಕ್ಷಣಾ ಪಡೆ (ರೈಲ್ವೆ ಪ್ರೊಟೆಕ್ಷನ್ ಫೋರ್ಸ್ - ಆರ್‌ಪಿಎಫ್) ಶ್ರಮಿಸುತ್ತಿದೆ.
ಹೌದು, ರೈಲ್ವೆ ಆಸ್ತಿ, ಪ್ರಯಾಣಿಕರು, ಪ್ರಯಾಣಿಕರ ಪ್ರದೇಶಗಳು ಮತ್ತು ರೈಲ್ವೆಗೆ ಸಂಬಂಧಿತ ಇತರ ವಿಷಯಗಳ ಭದ್ರತೆಗೆ ಆರ್‌ಪಿಎಫ್ ಅರ್ಥಾತ್ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ನ ಜವಾಬ್ದಾರಿಯಾಗಿದೆ. ಜೊತೆಗೆ ರೈಲ್ವೆ ಪ್ರಯಾಣಕ್ಕೆ ಅನುಕೂಲವಾಗುವಂತೆ ವಾತಾವರಣ ಮೂಡಿಸುವುದು ಕೂಡ ಆರ್‌ಪಿಎಫ್ ಸಿಬ್ಬಂದಿ ಮತ್ತು ಪೊಲೀಸರ ಹೊಣೆಗಾರಿಕೆಯಾಗಿದೆ. ಇದರ ಭಾಗವಾಗಿಯೇ ರೈಲ್ವೆಗಳಲ್ಲಿ ತೃತೀಯ ಲಿಂಗಗಳ ಹಾವಳಿ ತಡೆಗೂ ಆರ್‌ಪಿಎಫ್ ಪ್ರಯತ್ನಿಸುತ್ತಿದೆ. ಕಳೆದ ಒಂದು ತಿಂಗಳಿಂದ ಇದುವರೆಗೆ ರೈಲಿನಲ್ಲಿ ಉಪದ್ರವ ಸೃಷ್ಟಿಸುವುದು ಮತ್ತು ದುರ್ವರ್ತನೆಗೆ ಸಂಬಂಧಿಸಿದಂತೆ 1,200ಕ್ಕೂ ಹೆಚ್ಚು ಟ್ರಾನ್ಸ್‌ಜೆಂಡರ್‌ಗಳನ್ನು ಆರ್‌ಪಿಎಫ್ ಸಿಬ್ಬಂದಿ ಸೆರೆಹಿಡಿದಿದ್ದಾರೆ.
ರೈಲಿನಲ್ಲಿ ಜಾಗೃತಿ ಅಭಿಯಾನ: ರೈಲ್ವೆ ಪ್ರಯಾಣದ ಸಂದರ್ಭದಲ್ಲಿ ನಡೆಯುವ ಅಹಿತರ ಘಟನೆಗಳನ್ನು ತಡೆಯಲು ಮತ್ತು ಇದರ ಬಗ್ಗೆ ಜಾಗೃತಿ ಮೂಡಿಸಲೆಂದು ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಒಂದು ತಿಂಗಳ ಅವಧಿಯ ಪ್ಯಾನ್ ಇಂಡಿಯಾ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಮಾನದ ಮೂಲಕ ಜಗಳ ಮುಕ್ತ ಪ್ರಯಾಣಕ್ಕೆ ಅನುಕೂಲವಾಗುವಂತೆ ಮತ್ತು ಪ್ರಯಾಣಿಕರಲ್ಲಿ ಸುರಕ್ಷತೆಯ ಪ್ರಜ್ಞೆಯನ್ನು ಮೂಡಿಸಲು ಕಾರ್ಯ ನಡೆಯುತ್ತಿದೆ.
ಮಹಿಳೆಯರು ಮತ್ತು ಅಂಗವಿಕಲರಿಗೆ ಮೀಸಲಾದ ಕೋಚ್‌ಗಳಿಗೆ ಅನಧಿಕೃತ ಪ್ರವೇಶ, ಸಾಮಾನ್ಯ ಕೋಚ್‌ಗಳಲ್ಲಿ ಅನಧಿಕೃತ ವ್ಯಕ್ತಿಗಳಿಂದ ಸೀಟ್ಗಳನ್ನು ಆಕ್ರಮಿಸುವ ಕುರಿತಂತೆಯೂ ಜಾಗೃತಿ ಮೂಡಿಸಲಾಗುತ್ತಿದೆ. ಇದರೊಂದಿಗೆ ರೈಲಿನಲ್ಲಿ ಉಪದ್ರವ, ಭಿಕ್ಷಾಟನೆ ಮತ್ತುತೃತೀಯ ಲಿಂಗಗಳಿಂದ ಹಣ ಸುಲಿಗೆ ಮಾಡುವುದರ ವಿರುದ್ಧ ಕೂಡ ಆರ್‌ಪಿಎಫ್ ಸಿಬ್ಬಂದಿ ಅಭಿಯಾನದ ಮೂಲಕ ಅರಿವು ಮೂಡಿಸತೊಡಗಿದ್ದಾರೆ. ಈ ಸಂದರ್ಭದಲ್ಲಿ ರೈಲಿನಲ್ಲಿ ದುರ್ವರ್ತನೆಯಲ್ಲಿ ತೊಡಗಿದ್ದ 1,200ಕ್ಕೂ ಅಧಿಕ ತೃತೀಯ ಲಿಂಗಗಳನ್ನು ಸೆರೆಹಿಡಿಯಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಕ್ರಮ ಎಂಟ್ರಿ - 11,400 ಜನರ ಸೆರೆ: ಮಹಿಳೆಯರು ಮತ್ತು ಅಂಗವಿಕಲರಿಗೆ ಮೀಸಲಾದ ಕೋಚ್‌ಗಳಿಗೆ ಅಕ್ರಮ ಎಂಟ್ರಿ ಕೊಟ್ಟವರಿಗೂ ಆರ್‌ಪಿಎಫ್ ಸಿಬ್ಬಂದಿ ಬಿಸಿ ಮುಟ್ಟಿಸಿದ್ದು, ಅಕ್ರಮ ಪ್ರವೇಶಕ್ಕಾಗಿ ಒಟ್ಟಾರೆ 11,400 ಜನರನ್ನು ಬಂಧಿಸಲಾಗಿದೆ. ಮಹಿಳೆಯರಿಗೆ ಮೀಸಲಾದ ಬೋಗಿಗಳಲ್ಲಿ ಅನಧಿಕೃತವಾಗಿ ಪ್ರವೇಶಿಸಿದ್ದಕ್ಕಾಗಿ 5,100 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಹಾಗೆ ವಿಕಲಾಂಗ ವ್ಯಕ್ತಿಗಳಿಗೆ ಮೀಸಲಾದ ಬೋಗಿಗಳನ್ನು ಆಕ್ರಮಿಸಿಕೊಂಡ ಅಥವಾ ಪ್ರವೇಶಿಸಿದ 6,300ಕ್ಕೂ ಹೆಚ್ಚು ಜನರ ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ಷಾಂತರ ರೂಪಾಯಿ ದಂಡ ವಸೂಲಿ: ರೈಲ್ವೆ ನಿಯಮಗಳನ್ನು ಉಲ್ಲಂಘನೆ ಮಾಡಿ ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದಂತೆ ಬಂಧಿತರ ವಿರುದ್ಧ ರೈಲ್ವೆ ಕಾಯ್ಡೆಯಡಿ ಕಾನೂನು ಕ್ರಮ ಕೈಗೊಂಡು, ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಮಹಿಳೆಯರಿಗೆ ಮೀಸಲಾದ ಬೋಗಿಗಳಲ್ಲಿ ಪ್ರವೇಶಿಸಿದ ಸಂಬಂಧ ಅಪರಾಧಿಗಳಿಂದ ಕ್ರಮವಾಗಿ 6.71 ಲಕ್ಷ ರೂಪಾಯಿ ಹಾಗೂ ಅಂಗವಿಕಲರಿಗೆ ಮೀಸಲಾದ ಕೋಚ್‌ಗಳಿಗೆ ಎಂಟ್ರಿ ಕೊಟ್ಟ ಆರೋಪಿಗಳಿಂದ 8.68 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಈ ದಂಡದ ಮೊತ್ತದಲ್ಲಿ 1.28 ಲಕ್ಷ ರೂ.ಗಳನ್ನು ತೃತೀಯಲಿಂಗಿಗಳಿಂದ ವಸೂಲಿ ಮಾಡಲಾಗಿದೆ. ಎಂದೂ ರೈಲ್ವೆ ಅಧಿಕಾರಿಗಳು ವಿವರಿಸಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕನಿಗೆ ಥಳಿಸಿದ ಇಬ್ಬರು ರೈಲ್ವೆ ಅಧಿಕಾರಿಗಳು: ಟಿಟಿಇಗಳನ್ನ ಕೆಲಸದಿಂದ ಅಮಾನತು ಮಾಡಿದ ಇಲಾಖೆ