ಹೈದರಾಬಾದ್: ರೌಡಿಗಳ ಗುಂಪುಗಳ ಮಧ್ಯೆ ನಡೆದ ಗುಂಡಿನ ಕಾಳಗದಿಂದ ಹೈದರಾಬಾದ್ನಲ್ಲಿ ಕೆಲ ಹೊತ್ತು ಆತಂಕ ಮನೆ ಮಾಡಿತ್ತು. ಜಮೀನು ವ್ಯಾಜ್ಯವೊಂದರ ಕುರಿತಾಗಿ ರೌಡಿಗಳ ಗುಂಪುಗಳು ಹೊಡೆದಾಡಿಕೊಂಡಿದ್ದು, ಗುಂಡಿನ ಚಕಮಕಿಯೂ ನಡೆದಿದೆ. ಸೈಬರಾಬಾದ್ ಕಮಿಷನರೇಟ್ ವ್ಯಾಪ್ತಿಯ ಮಾಧಾಪುರ ಪೊಲೀಸ್ ಠಾಣೆಯ ಹತ್ತಿರದ ನೀರೂಸ್ ಜಂಕ್ಷನ್ ಬಳಿ ಘಟನೆ ನಡೆದಿದೆ. ರಿಯಲ್ ಎಸ್ಟೇಟ್ ವಿವಾದದ ಕಾರಣದಿಂದಲೇ ಈ ಹೊಡೆದಾಟ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ಹಿನ್ನೆಲೆ: 'ಓಲ್ಡ್ ಟೌನ್ ರೌಡಿ ಶೀಟರ್‌ಗಳಾದ ಇಸ್ಮಾಯಿಲ್ ಮತ್ತು ಮುಜಾಹಿದ್ ಅಲಿಯಾಸ್ ಮುಜ್ಜು ಈ ಹಿಂದೆ ಜೈಲಿನಲ್ಲಿ ಭೇಟಿಯಾಗಿದ್ದರು. ಆಗಿನಿಂದಲೂ ಇಬ್ಬರೂ ಆತ್ಮೀಯರಾಗಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಗಂಡಿ ಮೈಸಮ್ಮ ಪ್ರದೇಶದಲ್ಲಿನ 250 ಗಜ ಜಮೀನಿಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಹಲವು ಬಾರಿ ಇಬ್ಬರೂ ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಆದರೆ, ನಿನ್ನೆ ರಾತ್ರಿ ಇಬ್ಬರೂ ಮತ್ತೊಮ್ಮೆ ಚರ್ಚೆ ನಡೆಸುವ ಉದ್ದೇಶದಿಂದ ತಮ್ಮ ಹಿಂಬಾಲಕರೊಂದಿಗೆ ಪ್ರತ್ಯೇಕವಾಗಿ ಮಾದಾಪುರ ನೀರೂಸ್ಗೆ ಬಂದಿದ್ದಾರೆ. ಈ ಮಧ್ಯೆ, ಮುಜಾಹಿದ್ ಮತ್ತು ಜಿಲಾನಿ (ಮುಜಾಹಿದ್‌ನ ಬಲಗೈ) ಎರಡು ಗನ್ಗಳಿಂದ ಇಸ್ಮಾಯಿಲ್ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಗುಂಡು ಹಾರಿಸುವುದನ್ನು ತಡೆಯಲು ಯತ್ನಿಸಿದ ಇಸ್ಮಾಯಿಲ್ ಬೆಂಬಲಿಗ ಜಹಾಂಗೀರ್ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾನೆ. ಗುಂಡೇಟಿನಿಂದ ಇಸ್ಮಾಯಿಲ್ ಕುಸಿದು ಬಿದ್ದ ನಂತರ ಮುಜಾಹಿದ್ ಮತ್ತು ಅವನ ರೌಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಬಾಲಾನಗರ ಡಿಸಿಪಿ ಸಂದೀಪ್ ಹೇಳಿದ್ದಾರೆ.
ನಂತರ ಸ್ಥಳಕ್ಕೆ ಬಂದ ಇಸ್ಮಾಯಿಲ್ ನ ಇಬ್ಬರು ಬೆಂಬಲಿಗರು, ರಕ್ತದ ಮಡುವಿನಲ್ಲಿದ್ದ ಆತನನ್ನು ಓಸ್ಮಾನಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ತರುವಷ್ಟರಲ್ಲಿಯೇ ಇಸ್ಮಾಯಿಲ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಗಾಯಗೊಂಡಿರುವ ಜಹಾಂಗೀರ್ಗೆ ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ತಂಡ ರಚನೆ: ಶೂಟಿಂಗ್ ಪ್ರಕರಣದ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಬಾಲಾನಗರ ಡಿಸಿಪಿ ಸಂದೀಪ್ ಪರಿಶೀಲನೆ ನಡೆಸಿದ್ದಾರೆ. ಗುಂಡಿನ ಚಕಮಕಿ ನಡೆಸಿದ ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ:ಐಸಿಸ್ ಸಂಪರ್ಕ ಆರೋಪ: ಭಟ್ಕಳದಲ್ಲಿ ಶಂಕಿತನೊಬ್ಬ ಎನ್ಐಎ ವಶಕ್ಕೆ, ಗುಪ್ತ ಸ್ಥಳದಲ್ಲಿ ವಿಚಾರಣೆ