ಬಟಿಂಡಾ (ಪಂಜಾಬ್): ದರೋಡೆಕೋರರ ಗುಂಪೊಂದು ಶನಿವಾರ ರಾತ್ರಿ ಮನೆ ನುಗ್ಗಿ ತಾಯಿ ಮಗನನ್ನು ಕೊಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಈ ವೇಳೆ ತಾಯಿ ಸಾವನ್ನಪ್ಪಿದ್ದು, ಮಗ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಪ್ರಕರಣ ನಗರದ ಖೇತಾ ಸಿಂಗ್ ಬಸ್ತಿ ಪ್ರದೇಶದಲ್ಲಿ ನಡೆದಿದೆ. ತಾಯಿ ಸುಧಾರಾಣಿ(ವೃದ್ಧೆ) ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಅವರ ಮಗ ವಿಕಾಸ (35) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರು ಕಿರಾಣಿ ಅಂಗಡಿ ನಡೆಸುತ್ತಿದ್ದರು. ಭಾನುವಾರ ಬೆಳಗ್ಗೆ 5 ಗಂಟೆಗೆ ಅಂಗಡಿ ತೆರೆಯದಿದ್ದಾಗ ಅಕ್ಕಪಕ್ಕದ ನಿವಾಸಿಗಳು ಅವರ ನಿವಾಸಕ್ಕೆ ಬಂದು ವಿಚಾರಿಸಿದ್ದಾರೆ. ಅವರ ಮನೆಯಿಂದ ಹೊರ ಬರುತ್ತಿದ್ದ ರಕ್ತವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಒದಗಿಸಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದ್ದು, ವೃದ್ಧೆಯ ಬಳೆಗಳು ಹಾಗೂ ಕಿವಿಯೋಲೆ ನಾಪತ್ತೆಯಾಗಿರುವುದರಿಂದ ದರೋಡೆಕೋರರ ಕೃತ್ಯವೆಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಡಿಎಸ್ಪಿ ಗುರುಪ್ರೀತ್ ಸಿಂಗ್ ಮಾತನಾಡಿ, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಗ ಹಾಗೂ ತಾಯಿ ಇಬ್ಬರನ್ನು ನೆರೆಮನೆಯ ಸಂದೀಪ್ ಸಿಂಗ್ ಅವರು, ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿ ಆಸ್ಪತ್ರೆಗೆ ಕರೆತರುವಾಗ ಸಾವನ್ನಪ್ಪಿದ್ದರೆ, ತೀವ್ರವಾಗಿ ಗಾಯಗೊಂಡಿರುವ ಅವರ ಮಗ ವಿಕಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಪಂಜಾಬ್‌ನಲ್ಲಿ ಮಾದಕ ವ್ಯಸನ ಹೆಚ್ಚಾಗುತ್ತಿದೆ. ಮಾದಕ ವ್ಯಸನಿಗಳು ಹಣಕ್ಕಾಗಿ ಮನೆಗಳನ್ನು ದೋಚುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರು ದರೋಡೆ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂಓದಿ:ಕೊಟ್ಟಿಗೆಗೆ ನುಗ್ಗಿ ಮೂರು ದನಗಳನ್ನು ಕೊಂದ ಹುಲಿ : ಅರಣ್ಯಾಧಿಕಾರಿ ವಿರುದ್ಧ ಸ್ಥಳೀಯರ ಆಕ್ರೋಶ