ಸೋನಿಪತ್, ಹರ್ಯಾಣ: ಕುಂಡ್ಲಿ ಮನೇಸರ್ ಪಲ್ವಾಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಉತ್ತರ ಪ್ರದೇಶದಿಂದ ಜಜ್ಜರ್‌ಗೆ ಭತ್ತ ಕಟಾವು ಮಾಡಲು ಹೋಗುತ್ತಿದ್ದ ಕಾರ್ಮಿಕರನ್ನು ತುಂಬಿದ್ದ ಪಿಕಪ್‌ಗೆ ಹಿಂದಿನಿಂದ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಈ ದುರ್ಘಟನೆಯಲ್ಲಿ ಐವರು ಕಾರ್ಮಿಕರು ಸಾವನ್ನಪ್ಪಿದ್ದು, 11 ಕಾರ್ಮಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲ ಕಾರ್ಮಿಕರು ಉತ್ತರ ಪ್ರದೇಶದ ಶಹಜಾನ್‌ಪುರ ಜಿಲ್ಲೆಯ ನಿವಾಸಿಗಳು ಎಂದು ಹೇಳಲಾಗಿದೆ.
ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವು: ಖಾರ್ಖೋಡಾ ಪೊಲೀಸ್ ಠಾಣೆ ವ್ಯಾಪ್ತಿಯ ಸೋನಿಪತ್ ಕುಂಡ್ಲಿ ಮಾನೇಸರ್ ಪಲ್ವಾಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ತಕ್ಷಣ ಸೋನಿಪತ್ ಪೊಲೀಸರು ಮತ್ತು ಆರೋಗ್ಯ ಇಲಾಖೆ ತಂಡವು ಸ್ಥಳಕ್ಕೆ ದೌಡಾಯಿಸಿತ್ತು. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತ ದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದ್ಯ ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿಯನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿಯಬಹುದಾಗಿದೆ. ಇನ್ನು ಪೊಲೀಸರು ಮೃತ ಸಂಬಂಧಿಕರಿಗೆ ಮಾಹಿತಿ ತಿಳಿಸುವ ಕಾರ್ಯ ಕೈಗೊಂಡಿದ್ದಾರೆ.
ಕುಂಡ್ಲಿ ಮನೇಸರ್ ಪಲ್ವಾಲ್ ಎಕ್ಸ್‌ಪ್ರೆಸ್‌ವೇಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ ಎಂಬ ಆರೋಪವೂ ಕೇಳಿ ಬಂದಿದೆ. ಅಕ್ಟೋಬರ್ 7 ರಂದು ಕುಂಡ್ಲಿ ಮಾನೇಸರ್ ಪಲ್ವಾಲ್ ಎಕ್ಸ್‌ಪ್ರೆಸ್‌ವೇಯಲ್ಲಿ ನುಹ್ ಬಳಿ ಐದು ವಾಹನಗಳು ಪರಸ್ಪರ ಡಿಕ್ಕಿ ಹೊಡೆದವು. ಇದರಲ್ಲಿ 4 ಮಂದಿ ಸಾವನ್ನಪ್ಪಿದ್ದರು. ನುಹ್ ಬಳಿಯ ಕೆಎಂಪಿಯಲ್ಲಿ ನಿಂತಿದ್ದ ಟ್ರಕ್ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿತ್ತು. ಇದಾದ ಬಳಿಕ ಮೂರು ವಾಹನಗಳಿಗೂ ಲಾರಿ ಡಿಕ್ಕಿ ಹೊಡೆದಿದೆ. ಇದರಲ್ಲಿ ಪೊಲೀಸ್ ವಾಹನವೂ ಜಖಂಗೊಂಡಿತ್ತು.
ಮಹಿಳೆಯರು ಸೇರಿ 7 ಜನರು ಸಾವು: ಟಿಪ್ಪರ್, ಲಾರಿ ಮತ್ತು ಕ್ರೂಸರ್ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿ ಮಹಿಳೆಯರು ಸೇರಿದಂತೆ 7 ಜನರು ಮೃತಪಟ್ಟಿದ್ದರು. ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವ್ಯಾಸನಕೇರಿ ಬಳಿ ರಾಷ್ತ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿತ್ತು.
ಓದಿ: ಮೀನು ಸಾಗಾಟದ ವಾಹನಕ್ಕೆ ಹಿಂದಿನಿಂದ ಸ್ಕೂಟಿ ಡಿಕ್ಕಿ: ಸವಾರ ಸಾವು