ಬಾರಾಬಂಕಿ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಬಸ್ಗೆ ಟ್ರಕ್ ಡಿಕ್ಕಿ ಹೊಡೆದಿ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 24 ಜನರು ಗಾಯಗೊಂಡಿದ್ದಾರೆ. ಬಾರಾಬಂಕಿಯ ಮಹುಂಗುಪುರ ಬಳಿ ಈ ಘಟನೆ ಸಂಭವಿಸಿದೆ. ಡಬಲ್ ಡೆಕ್ಕರ್ ಬಸ್ಗೆ ಟ್ರಕ್ ಡಿಕ್ಕಿ ಹೊಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಡಬಲ್ ಡೆಕ್ಕರ್ ಬಸ್ ನೇಪಾಳಿ ವಲಸೆ ಕಾರ್ಮಿಕರನ್ನು ಹೊತ್ತು ಗೋವಾಕ್ಕೆ ತೆರಳುತ್ತಿತ್ತು. ಈ ವೇಳೆ ಟೈರ್ ಪಂಕ್ಚರ್ ಆಗಿದೆ. ರಸ್ತೆ ಪಕ್ಕದಲ್ಲಿ ಬಸ್ ನಿಲ್ಲಿಸಿ, ಟೈರ್ ಚೇಂಜ್ ಮಾಡ್ತಿದ್ದ ವೇಳೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಬಸ್ನಲ್ಲಿ ಸುಮಾರು 60 ಪ್ರಯಾಣಿಕರು ಪ್ರಯಾಣ ಬೆಳೆಸುತ್ತಿದ್ದರು. ಇದರಲ್ಲಿ ನಾಲ್ವರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಅವರನ್ನೆಲ್ಲ ಬಾರಾಬಂಕಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಆರು ಮಂದಿಯನ್ನು ವೈದ್ಯರು ಲಕ್ನೋ ಟ್ರಾಮಾ ಸೆಂಟರ್ಗೆ ರವಾನಿಸಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ಪೂರ್ಣೇಂದು ಸಿಂಗ್ ತಿಳಿಸಿದ್ದಾರೆ. ಉಳಿದ ಪ್ರಯಾಣಿಕರು ಸುರಕ್ಷಿತವಾಗಿದ್ದು, ಅವರನ್ನ ನೇಪಾಳಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಅಪಘಾತ ನಡೆದ ಸಮಯದಲ್ಲಿ ಪ್ರಯಾಣಿಕರು ಗಾಢನಿದ್ರೆಯಲ್ಲಿದ್ದರು. 25 ಜನರ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ: ವಿಜಯಪುರ: ಭೀಕರ ರಸ್ತೆ ಅಪಘಾತದಲ್ಲಿ ಮಗು, ಬಾಣಂತಿ ಸೇರಿ ಮೂವರು ಸಾವು
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದ್ದು, ಇದೀಗ ಅವರ ಕುಟುಂಬಕ್ಕೆ ಹಸ್ತಾಂತರಿಸುವ ಕೆಲಸ ನಡೆಯತ್ತಿದೆ. ಎನ್ಸಿಆರ್ಬಿ ಪ್ರಕಾರ, 2021ರಲ್ಲಿ ಉತ್ತರ ಪ್ರದೇಶದಲ್ಲಿ 24,711 ಜನರು ರಸ್ತೆ ಅಪಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. 2021ರಲ್ಲೇ ಭಾರತದಲ್ಲಿ ದಾಖಲೆಯ 4.22 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದ್ದು, 1.73 ಲಕ್ಷ ಜನರು ಸಾವನ್ನಪ್ಪಿದ್ದಾರೆ.