ಲಕ್ನೋ(ಉತ್ತರ ಪ್ರದೇಶ): ವಿಧಾನಸಭಾ ಉಪಚುನಾವಣೆಯಲ್ಲಿ ಇಲ್ಲಿನ ಖತೌಲಿ ಕ್ಷೇತ್ರದಿಂದ ಪಕ್ಷದ ಟಿಕೆಟ್ ನಿರೀಕ್ಷೆಯಲ್ಲಿದ್ದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ನಾಯಕ ಅಭಿಷೇಕ್ ಚೌಧರಿ ಗುರ್ಜರ್ ಅವರು ಮಂಗಳವಾರ ಬಿಜೆಪಿಗೆ ಸೇರಿದ್ದಾರೆ.
ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರರಾಗಿದ್ದ ಗುರ್ಜರ್ ಅವರು ಇಲ್ಲಿನ ರಾಜ್ಯ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಅವರ ನಿವಾಸದಲ್ಲಿ ಕೇಸರಿ ಪಕ್ಷ ಸೇರ್ಪಡೆಗೊಂಡರು. ಖತೌಲಿ ಕ್ಷೇತ್ರದಿಂದ ಗುರ್ಜರ್ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ ಪಕ್ಷ ಮಾಜಿ ಶಾಸಕ ಮದನ್ ಭಯ್ಯಾ ಅವರಿಗೆ ಟಿಕೆಟ್ ನೀಡಿದ್ದರಿಂದ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
2013ರ ಮುಜಾಫರ್‌ನಗರ ಗಲಭೆಗೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಇಲ್ಲಿನ ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರಿಗೆ ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಖತೌಲಿ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರದಿಂದ ವಿಕ್ರಮ್ ಸೈನಿ ಅವರ ಪತ್ನಿ ರಾಜಕುಮಾರಿ ಸೈನಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಆರ್‌ಎಲ್‌ಡಿ ಮುಖಂಡ ಬಿಜೆಪಿ ಸೇರಿದರೆ ಪಕ್ಷ ಬಲವರ್ಧನೆಯಾಗಲಿದೆ ಎಂದು ಭೂಪೇಂದ್ರ ಸಿಂಗ್ ಚೌಧರಿ ಹೇಳಿದ್ದಾರೆ.
ಇದನ್ನೂ ಓದಿ: ಹಿಮಾಚಲ ಚುನಾವಣೆಗೆ ಮೂರೇ ದಿನ ಬಾಕಿ: ಕಾಂಗ್ರೆಸ್ನ 26 ನಾಯಕರು ಬಿಜೆಪಿ ಸೇರ್ಪಡೆ