ರಾಂಚಿ/ಪಾಟ್ನಾ: ಲಾಲು ಪ್ರಸಾದ್‌ಗೆ ವಿಶೇಷ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಔಪಚಾರಿಕ ಪ್ರಕ್ರಿಯೆಗಳು ಇಂದು ಪೂರ್ಣಗೊಳ್ಳಲಿವೆ. ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಮೇವು ಹಗರಣಕ್ಕೆ ಸಂಬಂಧಿಸಿ ಡೊರಾಂಡ ಖಜಾನೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾರೆ. ಜಾರ್ಖಂಡ್ ಹೈಕೋರ್ಟ್ ಆದೇಶದಂತೆ ಇನ್ನು ಕೆಲವೇ ಗಂಟೆಗಳಲ್ಲಿ ಲಾಲೂ ಪ್ರಸಾದ್ ಯಾದವ್ ಜೈಲಿನಿಂದ ಹೊರಬರಲಿದ್ದಾರೆ.
ಜಾರ್ಖಂಡ್ ಹೈಕೋರ್ಟ್ ಏಪ್ರಿಲ್ 22 ರಂದು ಲಾಲು ಪ್ರಸಾದ್‌ಗೆ ಜಾಮೀನು ಮಂಜೂರು ಮಾಡಿದೆ. ಆದರೆ, ಜಾಮೀನು ಆದೇಶವನ್ನು ಬುಧವಾರ ಮಧ್ಯಾಹ್ನ ನೀಡಲಾಯಿತು. ಅಷ್ಟರೊಳಗೆ ಸಿವಿಲ್ ನ್ಯಾಯಾಲಯವು ಬೆಳಗಿನ ಕಾರ್ಯ ಮುಗಿದ ಹಿನ್ನೆಲೆ ಮುಚ್ಚಿತ್ತು. ಈ ಹಿನ್ನೆಲೆ ವಿಶೇಷ ಸಿಬಿಐ ನ್ಯಾಯಾಲಯದಿಂದ ಜಾಮೀನು ಬಾಂಡ್ ಭರ್ತಿ ಮಾಡುವ ಔಪಚಾರಿಕತೆಗಳು ಇಂದು ಪೂರ್ಣಗೊಳ್ಳಲಿವೆ. ಲಾಲೂ ಪ್ರಸಾದ್ ಏಪ್ರಿಲ್ 30 ರಂದು ಪಾಟ್ನಾ ತಲುಪುವ ನಿರೀಕ್ಷೆಯಿದೆ.
ಓದಿ: ಬಹುಕೋಟಿ ಮೇವು ಹಗರಣ: ಲಾಲೂ ಪ್ರಸಾದ್‌ಗೆ ಜಾಮೀನು ಪ್ರಶ್ನಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ಲಾಲು ಪ್ರಸಾದ್ ಪರ ವಕೀಲ ಪ್ರಭಾತ್ ಕುಮಾರ್ ಮಾತನಾಡಿ, ಏಪ್ರಿಲ್ 27ರಂದು ಜಾರ್ಖಂಡ್ ಹೈಕೋರ್ಟ್‌ನಿಂದ ಜಾಮೀನಿನ ಆದೇಶ ಬಂದಿತ್ತು. ಈ ಜಾಮೀನು ಬಾಂಡ್ ಅನ್ನು ಇಂದು ಕೆಳ ನ್ಯಾಯಾಲಯದಲ್ಲಿ ಭರ್ತಿ ಮಾಡಲಾಗುತ್ತಿದೆ. ವಿಧಿವಿಧಾನಗಳು ಪೂರ್ಣಗೊಂಡ ನಂತರ ಜಾಮೀನು ಕೆಳ ನ್ಯಾಯಾಲಯದ ಆದೇಶವನ್ನು ಜೈಲು ಆಡಳಿತಕ್ಕೆ ಕಳುಹಿಸಲಾಗುವುದು ಎಂದರು.
ಜೈಲು ಆಡಳಿತದಿಂದ ಏಮ್ಸ್ ನಿರ್ದೇಶಕರಿಗೆ ತಿಳಿಸಲಾಗುವುದು. ಏಕೆಂದ್ರೆ ಲಾಲೂ ಪ್ರಸಾದ್ ಅನಾರೋಗ್ಯದಿಂದ ಬಳಲುತ್ತಿದ್ದು, ದೆಹಲಿ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಜೈಲು ಆಡಳಿತದ ಮಾಹಿತಿಯ ನಂತರವೇ ಲಾಲು ಪ್ರಸಾದ್ರನ್ನು ಅಧಿಕಾರಿಗಳು ಬಿಡುಗಡೆ ಮಾಡುತ್ತಾರೆ ಎಂದು ಅವರು ಹೇಳಿದರು.