ಮುಂಬೈ (ಮಹಾರಾಷ್ಟ್ರ) : ಉತ್ತರಪ್ರದೇಶದಲ್ಲಿ ಶಿಕ್ಷಿಕಿಯೊಬ್ಬರು ತರಗತಿಯ ಎಲ್ಲ ಮಕ್ಕಳಿಂದ ಬಾಲಕನಿಗೆ ಕಪಾಳಮೋಕ್ಷ ಮಾಡಿಸಿದ್ದ ಘಟನೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮಹಾರಾಷ್ಟ್ರದಲ್ಲಿ ಬಾಲಕನ ಕೆನ್ನೆಗೆ ಶಿಕ್ಷಕಿ ಬಾರಿಸಿದ್ದು, ಮೆದುಳಿಗೆ ಹಾನಿ ಉಂಟಾಗಿದೆ. ಮುಖ ಊದಿಕೊಂಡಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಘಟನೆ ಬಳಿಕ ಶಿಕ್ಷಕಿ ತಲೆಮರೆಸಿಕೊಂಡಿದ್ದಾಳೆ.
ರೇವಾ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಆಗಸ್ಟ್ 28 ರಂದು ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗ ಬಂದಿದೆ. 6 ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಶಿಕ್ಷಕಿ ಕೊಟ್ಟ ಪೆಟ್ಟಿನಿಂದ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ : ಸಂಗೀತ ಶಿಕ್ಷಕಿ ತರಗತಿಗೆ ಪ್ರವೇಶಿಸಿದಾಗ ವಿದ್ಯಾರ್ಥಿ ಯಾವುದೋ ಕಾರಣಕ್ಕಾಗಿ ಎದ್ದು ಗೌರವ ಸಲ್ಲಿಸಿಲ್ಲ. ಇಷ್ಟಕ್ಕೇ ಕುಪಿತಗೊಂಡ ಶಿಕ್ಷಕಿ ಬಾಲಕನ ಬಳಿ ಬಂದು ಎಲ್ಲರೆದುರು ಕಪಾಳಕ್ಕೆ ಬಲವಾಗಿ ಬಾರಿಸಿದ್ದಾರೆ. ಹೊಡೆತಕ್ಕೆ ತಕ್ಷಣವೇ ಮಗುವಿನ ಕಣ್ಣುಗಳು ಕೆಂಪಾಗಿ, ಊದಿಕೊಂಡಿವೆ. ಶಾಲೆ ಬಿಟ್ಟ ಬಳಿಕ ಮಗು ಮನೆಗೆ ಬಂದಾಗ ಕೆಣ್ಣು ಊದಿಕೊಂಡಿದ್ದು ನೋಡಿ ಪೋಷಕರು ಗಾಬರಿಗೊಂಡಿದ್ದಾರೆ. ಬಳಿಕ ಚಿಕಿತ್ಸೆ ಕೊಡಿಸಿ ನೋವನ್ನು ತಗ್ಗಿಸಿದ್ದಾರೆ.
ಘಟನೆ ನಡೆದ 3 ದಿನಗಳ ನಂತರ ಮಗುವಿಗೆ ತೀವ್ರ ಜ್ವರ ಕಾಣಿಸಿಕೊಂಡಿದೆ. ಮನೆಯವರು ಬಾಲಕನನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ. ವೈದ್ಯರು ತಪಾಸಣೆ ನಡೆಸಿದಾಗ ಮೆದುಳಿನ ಆಂತರಿಕ ಭಾಗದಲ್ಲಿ ಗಂಭೀರ ಗಾಯವಾಗಿರುವುದು ಬೆಳಕಿಗೆ ಬಂದಿದೆ. ಕಪಾಳಕ್ಕೆ ಬಲವಾಗಿ ಹೊಡೆದಿದ್ದಕ್ಕೆ ಮೆದುಳಿಗೆ ಹಾನಿಯುಂಟಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಇದು ಶಿಕ್ಷಕಿಯ ಕೃತ್ಯವೆಂದು ಅರಿತ ಪೋಷಕರ ಪಿತ್ತ ನೆತ್ತಿಗೇರಿಸಿದೆ.
ಶಿಕ್ಷಕಿಯ ವಿರುದ್ಧ ದೂರು, ಪರಾರಿ: ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿಸಲು ವೈದ್ಯರು ಸೂಚಿಸಿದ್ದು, ಬಾಲಕನಿಗೆ ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಲಕನಿಗೆ ಆಪರೇಷನ್ ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಬಾಲಕನ ಮೇಲೆ ಹಲ್ಲೆ ಮಾಡಿದ ಶಿಕ್ಷಕಿಯ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಪೊಲೀಸರು ಶಿಕ್ಷಕಿಯ ವಿರುದ್ಧ ಸೆಕ್ಷನ್ 308 ಮತ್ತು ಜೆಜೆ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದರ ಬಳಿಕ ಶಿಕ್ಷಕಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ.
ಮಕ್ಕಳಿಂದ ಹೊಡೆಸಿದ್ದ ಶಿಕ್ಷಕಿ: ಉತ್ತರಪ್ರದೇಶದ ಮುಜಾಫರ್ನಗರದ ಶಾಲೆಯಲ್ಲಿ ಹೋಮ್ ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಚಿಕ್ಕ ಬಾಲಕನಿಗೆ ತರಗತಿಯ ಉಳಿದೆಲ್ಲಾ ವಿದ್ಯಾರ್ಥಿಗಳಿಂದ ಶಿಕ್ಷಕಿ ಕಪಾಳಮೋಕ್ಷ ಮಾಡಿಸಿದ್ದಳು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಶಿಕ್ಷಕಿಯ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ವಿಡಿಯೋ ವೈರಲ್ ಆದ ಬಳಿಕ ಶಿಕ್ಷಕಿಯ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿತ್ತು. ಕೇಸ್ ದಾಖಲಾಗಿದ್ದರೂ ಶಿಕ್ಷಕಿ ಅದೊಂದು ದೊಡ್ಡ ವಿಷಯವೇ ಅಲ್ಲ ಎಂಬಂತೆ ಹೇಳಿಕೆ ನೀಡಿದ್ದಳು. ಬಳಿಕ ಘಟನೆಗೆ ಕ್ಷಮೆ ಕೇಳಿದ್ದಳು.
ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ ಪ್ರಕರಣ: ಯುಪಿ ಸರ್ಕಾರಕ್ಕೆ ನೊಟೀಸ್