ತಿರುವನಂತಪುರಂ: ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಮಂಗಳವಾರದವರೆಗೆ ಮಕರ ಸಂಕ್ರಾಂತಿ ಯಾತ್ರಿಗಳಿಂದ 16 ಕೋಟಿ ರೂ. ಸಂಗ್ರಹವಾಗಿದೆ. ಆದರೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ರಾಜ್ಯ ಸರ್ಕಾರದ ಸಹಾಯವನ್ನು ಕೋರಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ.
ಮಾಹಿತಿಯ ಪ್ರಕಾರ, ಹಂಡಿಯಲ್ (ಮಲಯಾಳಂನಲ್ಲಿ ಕನಿಕ್ಕ), ಅರ್ವನ ಮತ್ತು ಅಪ್ಪಂ ಮಾರಾಟ ಮತ್ತು ದೇವಾಲಯದಲ್ಲಿ ವಿವಿಧ ಪೂಜಾ ಮತ್ತು ವಾಜಿಪಾಡುಗಳಿಗೆ ಸೇರಿದಂತೆ ಇತರ ಶುಲ್ಕಗಳು ಸೇರಿ 16,00,32,673 ರೂ. ಸಂಗ್ರಹವಾಗಿದೆ.
ಇದನ್ನೂ ಓದಿ: ಮಧುರೈನಲ್ಲಿ ಜಲ್ಲಿಕಟ್ಟು ಸಂಭ್ರಮ: 58 ಮಂದಿಗೆ ಗಾಯ
ಕೊರೊನಾ ಕಾರಣದಿಂದಾಗಿ ಜಾರಿಯಾದ ಲಾಕ್ಡೌನ್ ಪರಿಣಾಮ ಮಂಡಲ ಮಕರವಿಳಕ್ಕು ಯಾತ್ರಾ ಋತುವಿನ 54 ದಿನಗಳಲ್ಲಿ 1,32,673 ಜನರು ಶಬರಿಮಲೆಗೆ ಭೇಟಿ ನೀಡಿದ್ದರು. ಆದರೆ, ವಾರದ ಎಲ್ಲ ದಿನಗಳಲ್ಲಿ 1000 ಯಾತ್ರಿಕರನ್ನು ದರ್ಶನಕ್ಕಾಗಿ ದೇವಾಲಯಕ್ಕೆ ಬಿಡಲಾಯಿತು ಮತ್ತು ವಾರಾಂತ್ಯದಲ್ಲಿ 2000 ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಯಿತು. ಮಂಡಲ ಪೂಜೆ ಮತ್ತು ಮಕರವಿಳಕ್ಕು ಪೂಜೆಯ ದಿನದಂದು, ಕೊರೊನಾ ನಕಾರಾತ್ಮಕ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದ ನಂತರ 5000 ಯಾತ್ರಾರ್ಥಿಗಳಿಗೆ ವರ್ಚುವಲ್ ಕ್ಯೂ ಮೂಲಕ ಪ್ರವೇಶಿಸಲು ಅವಕಾಶ ನೀಡಲಾಯಿತು.
ಕಳೆದ ವರ್ಷ, ಮಕರವಿಳಕ್ಕು ಯಾತ್ರೆ ಅವಧಿಗೆ ಹೋಲಿಸಿದರೆ ಈ ವರ್ಷ ಕೇವಲ 10 ಪ್ರತಿಶತದಷ್ಟು ಆದಾಯ ಸಂಗ್ರಹವಾಗಿದೆ.
ತಿರುವಾಂಕೂರು ದೇವಸ್ವಂ ಮಂಡಳಿಯು ಒಟ್ಟು 1250 ದೇವಸ್ಥಾನಗಳ ಒಡೆತನವನ್ನು ಹೊಂದಿದ್ದು, ಆದಾಯ ಕುಸಿತದಿಂದ ಈ ದೇವಸ್ಥಾನಗಳ ನಿತ್ಯ ಪೂಜಾ ಕೈಂಕರ್ಯಗಳನ್ನು ನಡೆಸಲು ಆರ್ಥಿಕ ಮುಗ್ಗಟ್ಟು ಎದುರಾಗಬಹುದು ಎನ್ನಲಾಗಿದೆ.