ಲಕ್ನೋ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಮುಖ್ಯಮಂತ್ರಿಯ ಸಲಹೆಗಾರನೆಂದು ನಂಬಿಸಿದ ವ್ಯಕ್ತಿಯೊಬ್ಬ ನಿವೃತ್ತ ಯೋಧನಿಗೆ 79 ಲಕ್ಷ ರೂಪಾಯಿ ವಂಚಿಸಿದ್ದಾನೆ. ಈ ಕುರಿತು ಮಾಜಿ ಯೋಧ ಮನೋಜ್ ಕುಮಾರ್ ಶರ್ಮಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ವಂಚನೆ ಪ್ರಕರಣದ ವಿವರ: 2018 ರಲ್ಲಿ ಸೇನೆಯಿಂದ ನಿವೃತ್ತಿಯಾದ ನಂತರ ಮನೋಜ್ ಕುಮಾರ್ ಶರ್ಮಾ ವಾಣಿಜ್ಯ ವ್ಯವಹಾರ ನಡೆಸುವ ಉದ್ದೇಶ ಹೊಂದಿದ್ದರು. ಇದೇ ಸಂದರ್ಭದಲ್ಲಿ ಐ.ಬಿ. ಸಿಂಗ್ ಎಂಬಾತ, ತಾನು ಮುಖ್ಯಮಂತ್ರಿಯ ಸಲಹೆಗಾರ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದಾನೆ. ನಂತರ, ನಿಮಗೆ ವಾಣಿಜ್ಯ ವ್ಯವಹಾರದಲ್ಲಿ ಪಾಲುದಾರಿಕೆ ನೀಡುವುದಾಗಿಯೂ ಶರ್ಮಾ ಅವರಿಗೆ ಹೇಳಿದ್ದಾನೆ. ಇದೇ ಸಂದರ್ಭದಲ್ಲಿ ಇನ್ನಿಬ್ಬರನ್ನು ಪರಿಚಯಿಸಿ, ಈ ಪೈಕಿ ಓರ್ವ ವ್ಯಕ್ತಿಯನ್ನು ಗಣಿ ಕಂಪನಿಯ ನಿರ್ದೇಶಕರೆಂದೂ ಇನ್ನೋರ್ವ ನ್ಯಾಯಾಧೀಶರೆಂದೂ ಹೇಳಿದ್ದಾನೆ.
ಅವಧ್ ಶಿಲ್ಪ ಗ್ರಾಮ ಎಂಬ ಪ್ರದೇಶದಲ್ಲಿ ಇವರಿಗೆ ಜಮೀನಿದೆ. ಅದರಲ್ಲಿ ವಾಣಿಜ್ಯ ವ್ಯವಹಾರ ಮಾಡುವ ಯೋಜನೆಯಿದ್ದು, ತಾವೂ ಸೇರಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಅದಕ್ಕಾಗಿ ವಸತಿ ಅಭಿವೃದ್ಧಿ ಇಲಾಖೆಗೆ 79 ಲಕ್ಷ ರೂಪಾಯಿಗಳನ್ನು ಪಾವತಿಸಬೇಕು. ನೀವು ಪಾವತಿಸಲು ಒಪ್ಪಿಕೊಂಡರೆ ನಿಮ್ಮನ್ನು ಶೇ 40 ರಷ್ಟು ಪಾಲುದಾರನನ್ನಾಗಿ ಮಾಡುವುದಾಗಿ ಹೇಳಿ, ಆರೋಪಿ ಹಣವನ್ನೂ ಪಡೆದುಕೊಂಡಿದ್ದಾನೆ.
ಆದರೆ, ಹೀಗೆ ಹಣ ಪಡೆದ ಮುಂದಿನ ಎರಡು ವರ್ಷಗಳಲ್ಲಿ ಯಾವುದೇ ಯೋಜನೆಯನ್ನು ಆತ ಪ್ರಾರಂಭಿಸಲಿಲ್ಲ. ಇದನ್ನು ಗಮನಿಸಿದ ಶರ್ಮಾ ಅವರು ಸಿಂಗ್‌ಗೆ ತಮ್ಮ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದಾರೆ. ಆತ ಹಣ ಕೊಡುವುದಕ್ಕೆ ನಿರಾಕರಿಸಿದ್ದಾನೆ. ವಂಚನೆಗೊಳಗಾದ ಶರ್ಮಾ ನ್ಯಾಯಾಲಯದ ನಿರ್ದೇಶನದ ಮೇರೆಗೆ ಗೋಮತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೂರ್ವ ವಲಯದ ಹೆಚ್ಚುವರಿ ಡಿಸಿಪಿ ಸೈಯದ್ ಅಲಿ ಅಬ್ಬಾಸ್ ಮಾಹಿತಿ ನೀಡಿದರು.
ಇದನ್ನೂ ಓದಿ: ಎಟಿಎಂನಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚನೆ: ಆರೋಪಿ ಬಂಧನ