ನವದೆಹಲಿ: ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 4.29 ಕ್ಕೆ ಇಳಿದಿದೆ. ಮಾರ್ಚ್‌ನಲ್ಲಿ ಇದು 5.52 ರಷ್ಟಿತ್ತು. ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆಗಳು ಕಡಿಮೆಯಾಗಿದ್ದರಿಂದ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದೆ ಎಂದು ಸರ್ಕಾರದ ಅಂಕಿ- ಅಂಶಗಳು ಬುಧವಾರ ತಿಳಿಸಿವೆ.
ರಿಸರ್ವ್ ಬ್ಯಾಂಕ್, ತನ್ನ ವಿತ್ತೀಯ ನೀತಿಯನ್ನು ರೂಪಿಸುವಾಗ ಮುಖ್ಯವಾಗಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂಬುದು ಗಮನಾರ್ಹ.
ಅಂಕಿ - ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಆಹಾರ ಪದಾರ್ಥಗಳ ಕ್ಷೇತ್ರದಲ್ಲಿ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇಕಡಾ 2.02 ರಷ್ಟಿದ್ದು, ಮಾರ್ಚ್‌ನಲ್ಲಿ ಇದು ಶೇಕಡಾ 4.87 ರಷ್ಟಿತ್ತು.
2020 ರ ಏಪ್ರಿಲ್‌ನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಕಂಡು ಬಂದಿದ್ದ ಸರಕು ಪೂರೈಕೆ ಅಡೆತಡೆಗಳಿಗೆ ಸಂಬಂಧಿಸಿದ ಮಾಹಿತಿ ಗಮನಿಸಿದರೆ, ಸಿಪಿಐ ಹಣದುಬ್ಬರವು ಏಪ್ರಿಲ್ 2021 ರಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಆದರೂ ಇದು ನಿರೀಕ್ಷೆಗಿಂತ ಸ್ವಲ್ಪ ಹೆಚ್ಚಾಗಿದೆ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
ಒಟ್ಟಾರೆಯಾಗಿ, ಚಾಲ್ತಿಯಲ್ಲಿರುವ ಸ್ಥಳೀಯ ನಿರ್ಬಂಧಗಳು ಏಪ್ರಿಲ್ 2021 ರಲ್ಲಿ ಬೆಲೆಗಳ ಮೇಲೆ ಸೀಮಿತ ಪರಿಣಾಮ ಬೀರಿವೆ ಎಂದು ಅವರು ಹೇಳಿದರು.
ಕೈಗಾರಿಕಾ ಉತ್ಪಾದನೆ ಶೇ 22.4 ಏರಿಕೆ:
ಮಾರ್ಚ್‌ನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆಯು ಶೇಕಡಾ 22.4 ರಷ್ಟು ಏರಿಕೆಯಾಗಿದೆ ಎಂದು ಅಧಿಕೃತ ಅಂಕಿ - ಅಂಶಗಳು ಬುಧವಾರ ತಿಳಿಸಿವೆ. ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ದತ್ತಾಂಶದ ಪ್ರಕಾರ, ಮಾರ್ಚ್ 2021 ರಲ್ಲಿ ಉತ್ಪಾದನಾ ವಲಯದ ಉತ್ಪಾದನೆಯು ಶೇಕಡಾ 25.8 ರಷ್ಟು ಏರಿಕೆಯಾಗಿದೆ.
ಗಣಿಗಾರಿಕೆ ಉತ್ಪಾದನೆಯು ಶೇಕಡಾ 6.1 ಮತ್ತು ವಿದ್ಯುತ್ ಉತ್ಪಾದನೆಯು ಮಾರ್ಚ್‌ನಲ್ಲಿ ಶೇಕಡಾ 22.5 ರಷ್ಟು ಏರಿಕೆಯಾಗಿದೆ. ಮಾರ್ಚ್ 2020 ರಲ್ಲಿ ಐಐಪಿ ಶೇಕಡಾ 18.7 ರಷ್ಟು ಕುಗ್ಗಿದೆ. ಐಐಪಿ 2019-20ರಲ್ಲಿ ಶೇ 0.8 ರಷ್ಟು ಸಂಕೋಚನಗೊಂಡಿದ್ದಕ್ಕೆ ಹೋಲಿಸಿದರೆ 2020-21ರ ಅವಧಿಯಲ್ಲಿ ಶೇಕಡಾ 8.6 ರಷ್ಟು ಸಂಕುಚಿತಗೊಂಡಿದೆ.
ಕಳೆದ ವರ್ಷ ಮಾರ್ಚ್‌ನಿಂದ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕೈಗಾರಿಕಾ ಉತ್ಪಾದನೆಯು ಶೇಕಡಾ 18.7 ರಷ್ಟು ಸಂಕುಚಿತಗೊಂಡಿದೆ. ಐಐಪಿ ಕಳೆದ ವರ್ಷ ಫೆಬ್ರವರಿಯಲ್ಲಿ ಶೇಕಡಾ 5.2 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.