ಜಾಮ್‌ನಗರ (ಗುಜರಾತ್): ಜಾಮ್‌ನಗರದ ಸಾಧನಾ ಕಾಲೋನಿ ಬ್ಲಾಕ್ ಸಂಖ್ಯೆ 69 ಪ್ರದೇಶದಲ್ಲಿನ ಮೂರು ಅಂತಸ್ತಿನ ವಸತಿ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ್ದು, ಏಳು ಜನ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. 30 ವರ್ಷಗಳಷ್ಟು ಹಳೆಯದಾದ ವಸತಿ ಕಟ್ಟಡ ಇದಾಗಿತ್ತು. ಕಟ್ಟಡದಲ್ಲಿ ಒಟ್ಟು ಆರು ಫ್ಲ್ಯಾಟ್‌ಗಳಿದ್ದವು. ಈ ಪೈಕಿ ಎರಡು ಫ್ಲಾಟ್‌ಗಳಲ್ಲಿ ಕುಟುಂಬಗಳು ವಾಸಿಸುತ್ತಿದ್ದವು. ಏಕಾಏಕಿ ಕಟ್ಟಡದ ಒಂದು ಭಾಗ ಕುಸಿದು ಬಿದ್ದದ್ದರಿಂದ ಒಂದೆ ಕುಟುಂಬದ ಮೂವರು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪಾಲಿಕೆ ತಂಡವೂ ರಕ್ಷಣಾ ಕಾರ್ಯಾಚರಣೆ ನಡೆಸಿ, ಅವಶೇಷಗಳಡಿ ಸಿಲುಕಿದ್ದ ಜನರನ್ನು ರಕ್ಷಿಸಿದ್ದಾರೆ. ನಂತರ ಅವರನ್ನು ಚಿಕಿತ್ಸೆಗಾಗಿ ಜಾಮ್‌ನಗರದ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗರ್ಭಿಣಿ ಪತ್ನಿ, ಪತಿ, ಮಗು ಸಾವು : ಘಟನೆಯಲ್ಲಿ ಒಂದೇ ಕುಟುಂಬದ ಮೂವರ ಸಾವಿಗೀಡಾಗಿದ್ದಾರೆ. ಗರ್ಭಿಣಿ ಪತ್ನಿ, ಪತಿ, ಪುತ್ರ ಸಾವಿನಿಂದ ಇಡೀ ಪ್ರದೇಶದಲ್ಲಿ ಶೋಕ ಮಡುಗಟ್ಟಿದೆ. ಜೈಪಾಲ್ ಸಾದಿಯಾ, ಅವರ ಪತ್ನಿ ಮಿತಾಲ್ಬೆನ್ ಮತ್ತು ಏಳು ವರ್ಷದ ಮಗ ಶಿವರಾಜ್ ದುರ್ಘಟನೆಯಲ್ಲಿ ಸಾವನ್ನಪಿದವರು.
ಪರಿಹಾರ ಘೋಷಣೆ: ಘಟನೆಯ ಬಗ್ಗೆ ಮಾಹಿತಿ ಪಡೆದ ರಾಜ್ಯದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ಅಲ್ಲದೇ ಮೃತರ ಕುಟುಂಬಕ್ಕೆ 4 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ಆರ್ಥಿಕ ನೆರವು ಘೋಷಿಸಿದರು. ಘಟನೆಯಲ್ಲಿ ಬದುಕುಳಿದ ಇಬ್ಬರು ಪುತ್ರಿಯರಿಗೆ ಪ್ರಧಾನಿ ಸುಕನ್ಯಾ ಯೋಜನೆಯಡಿ ನೆರವು ನೀಡಲಾಗುವುದು. ಕೂಡಲೇ 51 ಸಾವಿರ ರೂ. ನೆರವು ನೀಡಲು ವ್ಯವಸ್ಥೆ ಮಾಡಲಾಗುವುದಾಗಿ ಸಿಎಂ ತಿಳಿಸಿದ್ದಾರೆ. ಸ್ಥಳೀಯಾ ಶಾಸಕಿ ರಿವಾಬ ಜಡೇಜಾ (ಕ್ರಿಕೆಟರ್ ರವೀಂದ್ರ ಜಡೇಜಾ ಪತ್ನಿ) ಪರಿಹಾರದ ಬಗ್ಗೆ ಮಾಹಿತಿ ನೀಡಿದರು.
ವಿದ್ಯುತ್ ಸ್ಥಗಿತ: ಈ ಕಟ್ಟಡ ಕುಸಿದ ಪ್ರದೇಶ ಇಕ್ಕಟ್ಟಿನಿಂದ ಕೂಡಿದ್ದು, ಅಲ್ಲಿಯ ರಸ್ತೆಗಳು ತುಂಬಾ ಚಿಕ್ಕದಾಗಿವೆ. ಘಟನೆ ಸಂಭವಿಸಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ರಕ್ಷಣಾ ಕಾರ್ಯಕ್ಕೆ ಸಮಸ್ಯೆ ಉಂಟಾಗಿದೆ. ಕೂಡಲೇ ಪೊಲೀಸರು ಜನರನ್ನು ಚದುರಿಸಿ ವಾಹನ ಮತ್ತು ಜನರ ಓಡಾಟಕ್ಕೆ ರಸ್ತೆಯನ್ನು ಸರಿಪಡಿಸಿದರು. ಕಟ್ಟಡ ಕುಸಿತದ ವೇಳೆ ವಿದ್ಯುತ್ ತಂತಿಗಳು ತುಂಡಾಗಿದ್ದರಿಂದ ಇಡೀ ಪ್ರದೇಶದಲ್ಲಿ ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೂ ವಿದ್ಯುತ್ ಸ್ಥಗಿತ ಮಾಡಲಾಗಿತ್ತು.
ಜಾಮ್‌ನಗರ ಪಾಲಿಕೆ ಆಯುಕ್ತ ಪ್ರಕಾರ: ಹಳೆಯ ಕಟ್ಟಡವಾದ್ದರಿಂದ ಇದರಲ್ಲಿ ವಾಸಿಸದಂತೆ ಜನರಿಗೆ ಪದೇ ಪದೇ ಎಚ್ಚರಿಕೆ ನೀಡಲಾಗಿತ್ತು. ಇದು ಕುಸಿಯುವ ಹಂತದಲ್ಲಿದೆ ಎಂದೂ ಘೋಷಿಸಲಾಗಿತ್ತು. ಆದರೆ, ಇದಕ್ಕೆ ಜನ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜಾಮ್‌ನಗರ ಪಾಲಿಕೆ ಆಯುಕ್ತ ಡಿಎನ್ ಮೋದಿ ಹೇಳಿದ್ದಾರೆ.
ಸ್ಥಳೀಯರ ಪ್ರಕಾರ: ಮಧ್ಯಾಹ್ನದಿಂದಲೇ ಕಟ್ಟಡದ ಮೇಲ್ಛಾವಣಿಯಿಂದ ಮಣ್ಣು ಬೀಳಲಾರಂಭಿಸಿತ್ತು. ಸಂಜೆ ಸಮಯ ಕಟ್ಟಡ ಒಂದು ಭಾಗ ಕುಸಿದಿದೆ ಎಂದು ಕುಸಿದಿರುವ ಕಟ್ಟಡದ ಉಳಿದ ಭಾಗದಲ್ಲಿ ವಾಸವಾಗಿರುವ ಮನೋಜ್ ಗೋಸ್ವಾಮಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 80 ವರ್ಷ ಹಳೆಯ ಎರಡಂತಸ್ತಿನ ಕಟ್ಟಡ ಕುಸಿತ: ಮಗು ಸೇರಿ ಮೂವರ ಸಾವು