ನವದೆಹಲಿ: ಆರ್‌ಬಿಐ ತನ್ನ ಪ್ರಮುಖ ಬಡ್ಡಿದರಗಳಾದ ರೆಪೋ ಹಾಗು ರಿವರ್ಸ್ ರೆಪೋದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಸದ್ಯಕ್ಕೆ ರೆಪೋ ಹಾಗು ರಿವರ್ಸ್ ರೆಪೋ ದರಗಳು ಕ್ರಮವಾಗಿ ಶೇ 4 ಮತ್ತು ಶೇ 3.35ರಷ್ಟಿದೆ. ದೇಶದ ಆರ್ಥಿಕಾಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದರು.
ಹಣಕಾಸು ವರ್ಷ 2022 (2021-22)ರಲ್ಲಿ ದೇಶದ ಆರ್ಥಿಕ ವೃದ್ಧಿ ದರ ಶೇ 9.2ರಷ್ಟಿದ್ದು, ಇದು ದೇಶದ ಬೆಳವಣಿಗೆಯನ್ನು ಕೋವಿಡ್ ಸಾಂಕ್ರಾಮಿಕಕ್ಕೂ ಪೂರ್ವದ ವರ್ಷಕ್ಕೆ ಕೊಂಡೊಯ್ಯುತ್ತದೆ ಎಂದರು. ಇದೇ ರೀತಿ 2022-23ನೇ ಹಣಕಾಸು ವರ್ಷವು ಶೇ 7.8ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅವರು ವಿವರಿಸಿದರು.
ದೇಶದಲ್ಲಿ ಹಣಕಾಸು ವರ್ಷ 2022ರಲ್ಲಿ ಸಗಟು ಹಣದುಬ್ಬರ ದರವು ಶೇ 5.3ರಷ್ಟಿರಲಿದ್ದು, 2022-23ರಲ್ಲಿ ಶೇ 4.5ರಷ್ಟಿರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.
ಇದನ್ನು ಹೊರತುಪಡಿಸಿ, ಇ-ರುಪಿ ಡಿಜಿಟಲ್ ವೋಚರ್‌ಗಳಿಗಿದ್ದ ಸದ್ಯದ ಮಿತಿಯನ್ನು 10 ಸಾವಿರ ರೂಪಾಯಿಯಿಂದ 1 ಲಕ್ಷಕ್ಕೇರಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು.
ಇದನ್ನೂ ಓದಿ: ಗೋವಾ ಚುನಾವಣಾ ಪ್ರಚಾರ: ಅಮಿತ್ ಶಾ ಭೇಟಿಯಾದ ರಮೇಶ್ ಜಾರಕಿಹೊಳಿ
ರೆಪೋ, ರಿವರ್ಸ್ ರೆಪೋ ದರ ಎಂದರೇನು? ಕೇಂದ್ರ ಬ್ಯಾಂಕ್ ಇತರೆ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೊತ್ತಕ್ಕೆ ವಿಧಿಸುವ ಬಡ್ಡಿ ದರವೇ ರೆಪೋ ದರ. ರಿವರ್ಸ್ ರೆಪೋ ದರ ಎಂದರೆ, ಕೇಂದ್ರ ಬ್ಯಾಂಕ್ ಇತರೆ ವಾಣಿಜ್ಯ ಬ್ಯಾಂಕ್‌ಗಳಿಂದ ತಾನು ಪಡೆಯುವ ಸಾಲದ ಮೇಲಿನ ಬಡ್ಡಿದರವಾಗಿದೆ.
ಕಳೆದ 2020ರ ಮೇ ತಿಂಗಳಿಂದ ದೇಶದಲ್ಲಿ ದಾಖಲೆಯ ಬಾರಿಗೆ ರೆಪೋ ದರವು ಕಡಿಮೆ ಪ್ರಮಾಣದಲ್ಲಿದೆ. ಕೋವಿಡ್ ಕಾರಣಕ್ಕೆ ದೇಶದ ಆರ್ಥಿಕ ಪ್ರಗತಿಗೆ ಹಿನ್ನಡೆಯಾಗಿದ್ದು, ಅರ್ಥವ್ಯವಸ್ಥೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಕೇಂದ್ರ ಬ್ಯಾಂಕ್ ಈ ನಿಲುವು ತಾಳಲಿದೆ ಎಂದು ಆರ್‌ಬಿಐ ನಿರ್ಧಾರವನ್ನು ಗವರ್ನರ್ ಸಮರ್ಥಿಸಿಕೊಂಡರು.
ಕೇಂದ್ರ ಸರ್ಕಾರ ದೇಶದಲ್ಲಿ ಹಣದುಬ್ಬರ ದರವನ್ನು ಶೇ 2 ರಿಂದ 6ರ ಮಿತಿಯೊಳಗೆ ಕಾಯ್ದುಕೊಳ್ಳಬೇಕೆಂದು ಆರ್‌ಬಿಐ ಕಡ್ಡಾಯವಾಗಿ ತಿಳಿಸಿದೆ.