ನವದೆಹಲಿ: 74ನೇ ವರ್ಷದ ಗಣರಾಜ್ಯೋತ್ಸವ ಆಚರಣೆಗೆ ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. "ಈ ಬಾರಿ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇಲ್ಲಿವರೆಗೆ ಸಾರ್ವಜನಿಕರಿಗಾಗಿ ಸುಮಾರು 1 ರಿಂದ 1.5 ಲಕ್ಷ ಆಸನಗಳನ್ನು ಹಾಕಲಾಗುತ್ತಿತ್ತು. ಈ ಬಾರಿ 50,000 ಕ್ಕಿಂತಲೂ ಕಡಿಮೆ ಮಾಡಲಾಗಿದೆ" ಎಂದು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಶನಿವಾರ ತಿಳಿಸಿದ್ದಾರೆ.
ರೈಸಿನಾ ಹಿಲ್ಸ್ ಮತ್ತು ಪುರಾನಾ ಕಿಲಾ ನಡುವಿನ ರಸ್ತೆಯನ್ನು ಈ ಹಿಂದೆ 'ಕಿಂಗ್ಸ್ ವೇ' ಎಂದು ಕರೆಯಲಾಗುತ್ತಿತ್ತು. 1955ರಲ್ಲಿ ಇದಕ್ಕೆ 'ರಾಜಪಥ್' ಎಂದು ಹೆಸರಿಡಲಾಗಿದೆ. 2022ರಲ್ಲಿ 'ಕರ್ತವ್ಯ ಪಥ' ಎಂದು ಮರು ನಾಮಕರಣ ಮಾಡಲಾಯಿತು. "ಈ ರಸ್ತೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸುಲಭವಾಗಿ ಚಲಿಸಬಲ್ಲ ಆಸನಗಳನ್ನು ನಾಗರಿಕರಿಗಾಗಿ ಇರಿಸಲಾಗುತ್ತದೆ. 32,000 ಆಸನಗಳನ್ನು ಈಗಾಗಲೇ ನಿರ್ಧರಿಸಿರುವಂತೆ ಸಾರ್ವಜನಿಕರಿಗೆಂದೇ ಮೀಸಲಿಡಲಾಗುವುದು. ಈ ವಾರದಲ್ಲಿ ಇದಕ್ಕಾಗಿ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲಾಗುತ್ತದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ನಾರಿಶಕ್ತಿ.. ನೌಕಾದಳವನ್ನು ಲೀಡ್ ಮಾಡಲಿದ್ದಾರೆ ಮಂಗಳೂರಿನ ದಿಶಾ
ನಾಳೆ ನೇತಾಜಿ ಜನ್ಮದಿನ ಆಚರಣೆ: ಕಳೆದ ಗಣರಾಜ್ಯೋತ್ಸವದ ಪರೇಡ್ನಂತೆಯೇ ಈ ವರ್ಷವೂ ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದೇ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಸುಮಾರು 1,200 ಆಸನಗಳು ಲಭ್ಯವಿರುತ್ತದೆ. ಆಮಂತ್ರಿತರಿಗೆ ರಾಜಧಾನಿಯಲ್ಲಿ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಉಚಿತ ಮೆಟ್ರೋ ಪ್ರಯಾಣವನ್ನೂ ಪಡೆಯಬಹುದು. ಜನವರಿ 23ರಂದು ಪ್ರಾರಂಭಗೊಳ್ಳುವ ಕಾರ್ಯಕ್ರಮಗಳು ಜನವರಿ 30ರ ಹುತಾತ್ಮ ದಿನದವರೆಗೂ ಮುಂದುವರೆಯಲಿದೆ.
ಈಜಿಪ್ಟ್ ಅಧ್ಯಕ್ಷ ಗಣರಾಜ್ಯೋತ್ಸವ ಅತಿಥಿ: ಈ ಬಾರಿ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್‌ಸಿಸಿ ಆಗಮಿಸಲಿದ್ದಾರೆ. ಅವರು ಜನವರಿ 24ರಂದು ದೆಹಲಿ ತಲುಪಲಿದ್ದು, ವಿದೇಶಾಂಗ ಇಲಾಖೆ ರಾಜ್ಯ ಖಾತೆ ಸಚಿವ ರಾಜ್ಕುಮಾರ್ ರಂಜನ್ ಸ್ವಾಗತಿಸಲಿದ್ದಾರೆ. ಮರುದಿನ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪಾಧ್ಯಕ್ಷ ಜಗದೀಪ್ ಧನಕರ್ ಅವರನ್ನು ಭೇಟಿಯಾಗಲಿದ್ದಾರೆ.
ಪರೇಡ್‌ನಲ್ಲಿ ಈಜಿಪ್ಟ್ ಸೇನಾ ತಂಡ ಭಾಗಿ: ಈ ವರ್ಷ ಒಟ್ಟು ಭಾರತೀಯ ವಾಯುಪಡೆಯ 50 ವಿಮಾನಗಳು ಪರೇಡ್‌ನಲ್ಲಿ ಭಾಗವಹಿಸಲಿವೆ. ಭಾರತೀಯ ನೌಕಾಪಡೆಯ IL 38 'ಡಾಲ್ಫಿನ್' ವಿಮಾನ ಕಾರ್ಯಕ್ರಮದ ಮೊದಲ ಮತ್ತು ಕೊನೆಯ ಪ್ರದರ್ಶನ ನೀಡಲಿದೆ. ಮೆರವಣಿಗೆಯು 120 ಈಜಿಪ್ಟ್ ಸಶಸ್ತ್ರ ಪಡೆಗಳ ತಂಡವನ್ನೂ ಒಳಗೊಂಡಿರುತ್ತದೆ. ಈ ತಂಡ ಭಾರತೀಯ ಪಡೆಗಳೊಂದಿಗೆ ಪರೇಡ್‌ನಲ್ಲಿ ಪಾಲ್ಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: 74 ನೇ ಗಣರಾಜ್ಯೋತ್ಸ:ಸಮವಸ್ತ್ರದೊಂದಿಗೆ ಪರೇಡ್ ಪೂರ್ವಾಭ್ಯಾಸ