ಕೌಶಂಬಿ(ಉತ್ತರ ಪ್ರದೇಶ): ರೆಮ್ಡಿಸಿವಿರ್ ಔಷಧವನ್ನು ಕಳ್ಳತನ ಮಾಡುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಕೆಲವು ದುಷ್ಕರ್ಮಿಗಳು ಕೌಶಂಬಿಯ ಮಂಜನ್‌ಪುರ ಪ್ರದೇಶದಲ್ಲಿರುವ ರೆಮ್ಡಿಸಿವಿರ್ ಔಷಧಿಯ ಬಾಟಲ್ಗಳನ್ನು ಎಗರಿಸಿದ್ದಾರೆ. ಈ ಔಷಧಿಗಳನ್ನು ಆಸ್ಪತ್ರೆಯ ಸ್ಟೋರ್ ರೂಮ್ನಲ್ಲಿ ಇಡಲಾಗಿತ್ತು.
ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ರೋಗಿಗಳಿಗಾಗಿ ರೂಪಿಸಲಾಗಿದ್ದ ವಾರ್ಡ್ಗಳ ಸ್ಟೋರ್ ರೂಮ್ ಬಾಗಿಲಿನ ಬೀಗ ಮುರಿದು ರೆಮ್ಡಿಸಿವಿರ್ ಬಾಟಲಿಗಳನ್ನು ಕದ್ದಿದ್ದಾರೆ.
ಇದನ್ನೂ ಓದಿ: ಕೋವಿಡ್ಗೆ ಹೆದರಿ 55 ವರ್ಷದ ಮಹಿಳೆ ಆತ್ಮಹತ್ಯೆ
ಕಳ್ಳತನದ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ದೀಪಕ್ ಸೇಠ್ ಮಾಹಿತಿ ಸಂಗ್ರಹಿಸಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿದಾಗ ಕಳ್ಳಲು ಸ್ಟೋರ್ ರೂಮ್ನ ಬೀಗವನ್ನು ಮುರಿದು ರೆಮ್ಡಿಸಿವಿರ್ ಚುಚ್ಚುಮದ್ದಿನ ಬಾಟಲಿಗಳೊಂದಿಗೆ ಪರಾರಿಯಾಗಿರುವುದು ಕಂಡುಬಂದಿದೆ.
ಮಂಜನ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ.
ಇದಕ್ಕೂ ಮೊದಲು ಕೆಲವು ತಿಂಗಳ ಹಿಂದೆ ಈ ಆಸ್ಪತ್ರೆಯಲ್ಲಿ 5 ಲ್ಯಾಪ್ಟಾಪ್ಗಳು ಕಳ್ಳತನವಾಗಿದ್ದವು. ಈ ಪ್ರಕರಣವನ್ನು ಭೇದಿಸಿದ ಪೊಲೀಸರು ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿದ್ದು, ಜಿಲ್ಲಾಸ್ಪತ್ರೆಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಿದ್ದರು.