ವಿಜಯನಗರಂ(ಆಂಧ್ರಪ್ರದೇಶ): ವರ್ಷದಿಂದ ವರ್ಷಕ್ಕೆ ದೇಶ ಆಧುನಿಕತೆಯತ್ತ ಮುಂದುವರೆದಿದ್ದರೂ ಇಲ್ಲಿನ ಜನರ ಸಮಸ್ಯೆಗೆ ಮಾತ್ರ ಇಲ್ಲಿಯವರೆಗೆ ಪರಿಹಾರ ಸಿಕ್ಕಿಲ್ಲ. ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಿಂದ ತುಸು ದೂರದಲ್ಲಿ ವಾಸವಾಗಿರುವ ಆದಿವಾಸಿಗಳು ಪ್ರತಿದಿನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ಸರಿಯಾದ ರಸ್ತೆ ಸಂಪರ್ಕ, ಮೂಲ ಸೌಲಭ್ಯಗಳಿಲ್ಲದೆ ತೊಂದರೆಗೊಳಗಾಗಿದ್ದಾರೆ.
ಕೊಮರಡದ ಗಿರಿಜನ ಗೋದಾಮಿನಲ್ಲಿ ವಾಸವಾಗಿರುವ ಆದಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಗೆ ಹೋಗಬೇಕಾದರೆ ತುಂಬಿ ಹರಿಯುವ ನದಿ ದಾಟುವುದು ಅವರಿಗೆ ಅನಿವಾರ್ಯ ಸ್ಥಿತಿಯಾಗಿದೆ.
ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದ ಗರ್ಭಿಣಿಯೋರ್ವಳನ್ನ ಆಸ್ಪತ್ರೆಗೆ ದಾಖಲು ಮಾಡಲು ಸಂಬಂಧಿಕರು ತುಂಬಿ ಹರಿಯುವ ನದಿಯಲ್ಲೇ ಹೊತ್ತು ಸಾಗಿದ್ದಾರೆ. ಮಹಿಳೆ ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಆಕೆಯ ಗಂಡ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾನೆ. ಆದರೆ, ರಸ್ತೆ ಸಂಪರ್ಕವಿಲ್ಲದ ಕಾರಣ ಅಲ್ಲಿಗೆ ಬರಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಇದನ್ನೂ ಓದಿರಿ: ಮಹಿಳೆ ಮೇಲೆ ಗಂಡನ ಎದುರೇ ಕಾಮುಕರ ಅಟ್ಟಹಾಸ.. ಜೀವನ್ಮರಣದ ಮಧ್ಯೆ ಸಂತ್ರಸ್ತೆ ನರಳಾಟ
ಈ ವೇಳೆ ಬೇರೆ ದಾರಿ ಇಲ್ಲದೇ ಸಂಬಂಧಿಕರ ಸಹಾಯದಿಂದ ಗರ್ಭಿಣಿಯನ್ನ ಹೆಗಲ ಮೇಲೆ ಹೊತ್ತುಕೊಂಡು ತುಂಬಿ ಹರಿಯುತ್ತಿದ್ದ ನಾಗಾವಳಿ ನದಿಯನ್ನ ದಾಟಿದ್ದಾರೆ. ಒಂದು ದಡದಿಂದ ಮತ್ತೊಂದು ದಡಕ್ಕೆ ಬರುತ್ತಿದ್ದಂತೆ ಆ್ಯಂಬುಲೆನ್ಸ್ನಲ್ಲಿ ಹಾಕಿಕೊಂಡು ಪಾರ್ವತಿಪುರಂ ಏರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಗರ್ಭಿಣಿ ಸಂಬಂಧಿಕರು, ನದಿ ದಾಟುತ್ತಿದ್ದ ವೇಳೆ ಏನಾದ್ರೂ ಅನಾಹುತ ಸಂಭವಿಸಿದ್ದರೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದು, ಆದಷ್ಟು ಬೇಗ ರಸ್ತೆ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.