ನವದೆಹಲಿ: 75ನೇ ಗಣರಾಜ್ಯೋತ್ಸವಕ್ಕೆ ಮುಂಚಿತವಾಗಿ ಭಾರತದಲ್ಲಿ ಖಲಿಸ್ತಾನ್ಗಾಗಿ ಜನಾಭಿಪ್ರಾಯ ಸಂಗ್ರಹಿಸಲು ಮತದಾರರ ನೋಂದಣಿಯನ್ನು ಆರಂಭಿಸುವುದಾಗಿ ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಘೋಷಿಸಿದೆ. ಈ ಕಾರ್ಯಕ್ರಮದ ಉತ್ತೇಜನಕ್ಕಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1 ಮಿಲಿಯನ್ ಡಾಲರ್ ಖರ್ಚು ಮಾಡುವುದಾಗಿ ಅದು ತಿಳಿಸಿದೆ.
ತ್ರಿವರ್ಣ ಧ್ವಜವೇ ನಮ್ಮ ಗುರಿಯಾಗಿದೆ ಎಂದು ತಿಳಿಸಿರುವ ತೀವ್ರಗಾಮಿ ಸಂಘಟನೆಯ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್, ಜನವರಿ 26 ದೆಹಲಿಯಲ್ಲಿ ನಿರ್ಣಾಯಕ ದಿನವಾಗಲಿದೆ ಎಂದು ಎಂದು ಶುಕ್ರವಾರ ಬಿಡುಗಡೆ ಮಾಡಿದ ಹೊಸ ವೀಡಿಯೊದಲ್ಲಿ ಹೇಳಿದ್ದಾನೆ.
"ಜನವರಿ 26 ರಂದು ನಾವು ಭಾರತದಲ್ಲಿ ಖಲಿಸ್ತಾನ್ ಮತದಾರರ ನೋಂದಣಿಯನ್ನು ಪ್ರಾರಂಭಿಸಲಿದ್ದೇವೆ. ನಮ್ಮ ಗುರಿ ತಿರಂಗಾ. ಜನವರಿ 26 ದೆಹಲಿಯಲ್ಲಿ ನಿರ್ಣಾಯಕ ದಿನವಾಗಲಿದೆ. ದೆಹಲಿಯಲ್ಲಿ ಖಲಿಸ್ತಾನ್ ಧ್ವಜ ಹಾರಿಸಲು ನಾವು 1 ಮಿಲಿಯನ್ ಡಾಲರ್ ಖರ್ಚು ಮಾಡಲಿದ್ದೇವೆ" ಎಂದು ಎಸ್ಎಫ್ಜೆಯ ಕಾನೂನು ಸಲಹೆಗಾರ ಪನ್ನುನ್ ಹೇಳಿದ್ದಾನೆ.
ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಕೂಡ ಉಲ್ಲೇಖಿಸಿ ಪನ್ನುನ್ ಬೆದರಿಕೆ ಹಾಕಿದ್ದಾನೆ. "ಇದು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರಿಗೊಂದು ಪಾಠವಾಗಲಿದೆ." ಎಂದು ಪನ್ನುನ್ ಹೇಳಿದ್ದಾನೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಸಹಾಯ ಮಾಡಿದ್ದಕ್ಕಾಗಿ ಮ್ಯಾಕ್ರನ್ಗೆ ಈ ಮೂಲಕ ಪನ್ನುನ್ ಎಚ್ಚರಿಕೆ ನೀಡಿದ್ದಾನೆ. ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ 2020 ರಲ್ಲಿ ಭಾರತವು ಪನ್ನುನ್ನನ್ನು ನಿಯೋಜಿತ ಭಯೋತ್ಪಾದಕ ಎಂದು ಘೋಷಿಸಿದೆ.
ಮನೆಯಲ್ಲಿಯೇ ಇರಿ ಮತ್ತು ಸುರಕ್ಷಿತವಾಗಿರಿ ಎಂದು ದೆಹಲಿಯ ಜನತೆಗೆ ತಿಳಿಸಿರುವ ಸಿಖ್ ಉಗ್ರಗಾಮಿ ಪನ್ನುನ್, "ದೆಹಲಿಯ ಜನರೇ, ನಮ್ಮ ಹೋರಾಟ ನಿಮ್ಮ ವಿರುದ್ಧವಲ್ಲ. ಈ ಹೋರಾಟ ಖಲಿಸ್ತಾನ್ ಪರ ಸಿಖ್ಖರು ಮತ್ತು ಮೋದಿ ಆಡಳಿತದ ನಡುವಿನ ಹೋರಾಟ" ಎಂದಿದ್ದಾನೆ. ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಮುಂಚಿತವಾಗಿ ಅಮೃತಸರದಿಂದ ಅಯೋಧ್ಯೆಗೆ ಹೋಗುವ ವಿಮಾನಗಳನ್ನು ನಿರ್ಬಂಧಿಸುವಂತೆ ಪನ್ನುನ್ ಸೋಮವಾರ ಕರೆ ನೀಡಿದ್ದ.
ಸೆಪ್ಟೆಂಬರ್ 2023 ರಲ್ಲಿ ಅಮೃತಸರ ಮತ್ತು ಚಂಡೀಗಢ ನಗರಗಳಲ್ಲಿನ ಈತನ ಆಸ್ತಿಗಳನ್ನು ಎನ್ಐಎ ವಶಪಡಿಸಿಕೊಂಡಿದೆ. ಎಸ್ಎಫ್ಜೆ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಯುಎಪಿಎಯ ಹಲವಾರು ವಿಭಾಗಗಳ ಅಡಿಯಲ್ಲಿ ನವೆಂಬರ್ 20, 2023 ರಂದು ಎನ್ಐಎ ಮೊಕದ್ದಮೆಗಳನ್ನು ದಾಖಲಿಸಿದೆ.
ಇದನ್ನೂ ಓದಿ: ಅವಳಿ ಬಾಂಬ್ ಸ್ಫೋಟ ಘಟನೆ; 35 ಶಂಕಿತರನ್ನು ಬಂಧಿಸಿದ ಇರಾನ್ ಗುಪ್ತಚರ ಇಲಾಖೆ