ನವದೆಹಲಿ: ಜನವರಿ 26ರಂದು ನಡೆದ ಟ್ರ್ಯಾಕ್ಟರ್ ಪರೇಡ್ನಲ್ಲಿ ಕೆಂಪುಕೋಟೆ ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ನ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್ ಆಗ್ರಹಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಕೆಂಪು ಕೋಟೆ ಹಿಂಸಾಚಾರ ನಡೆಯಬಾರದಿತ್ತು. ಇದು ಪ್ರಜಾಪ್ರಭುತ್ವ ಹಾಗೂ ಕಾನೂನು ಸುವ್ಯವಸ್ಥೆಗೆ ವಿರುದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿರುವ ಜಾಗದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದು ನಿಜಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಓದಿ: ಧರಣಿ ಕುಳಿತ ಪ್ರಧಾನಿ ಮೋದಿ ಕಿರಿಯ ಸಹೋದರ: ಕಾರಣ!?
ಹಿಂಸಾಚಾರದಲ್ಲಿ ಭಾಗಿಯಾದವ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಆಜಾದ್, ಅಮಾಯಕ ರೈತರ ಮೇಲೆ ಸುಳ್ಳು ಕೇಸ್ ದಾಖಲು ಮಾಡಬೇಡಿ ಎಂದಿದ್ದಾರೆ. ಇದೇ ವೇಳೆ ಕೆಲ ಪತ್ರಕರ್ತರು ಹಾಗೂ ಶಶಿ ತರೂರ್ ಮೇಲೆ ದೇಶದ್ರೋಹ ಪ್ರಕರಣ ದಾಖಲು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇಡೀ ದೇಶವನ್ನೇ ಪ್ರತಿನಿಧಿಸುವ ಓರ್ವ ವ್ಯಕ್ತಿ ದೇಶದ್ರೋಹಿ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಕೃಷಿ ಕಾನೂನು ಹಿಂಪಡೆದುಕೊಳ್ಳುವಂತೆ ಆಗ್ರಹಿಸಿರುವ ಗುಲಾಮ್ ನಬಿ ಆಜಾದ್, ವಿವಿಧ ಗಡಿಗಳಲ್ಲಿ ದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಅವರಿಗೆ ನ್ಯಾಯ ಸಿಕ್ಕಲ್ಲ. ತಕ್ಷಣವೇ ಕೃಷಿ ಕಾಯ್ದೆ ಹಿಂಪಡೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಇದೇ ವೇಳೆ, ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿದ್ದು, ರಾಜ್ಯ ಸ್ಥಾನ ಮಾನ ನೀಡಿದ ಬಳಿಕವೇ ಅಲ್ಲಿ ಚುನಾವಣೆ ನಡೆಸಬೇಕು ಎಂದಿದ್ದಾರೆ. ಜತೆಗೆ ಕಣಿವೆ ನಾಡು ಅಭಿವೃದ್ಧಿ ಕಾಣಬೇಕಾದರೆ ಅಲ್ಲಿ ಮತ್ತೆ ರಾಜ್ಯ ಸ್ಥಾನಮಾನ ಅತಿ ಅವಶ್ಯವಾಗಿದೆ ಎಂದರು.