ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಸಂಪೂರ್ಣ ನೀರಿನಿಂದ ಜಲಾವೃತವಾಗಿವೆ.
ಚೆನ್ನೈನಲ್ಲಿ ನಿನ್ನೆ ರಾತ್ರಿಯಿಡೀ ಮಳೆಯಾಗಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 2015 ರ ಬಳಿಕ ಚೆನ್ನೈನಲ್ಲಿ ಕಂಡ ಮಹಾ ಮಳೆ ಎಂದು ಹವಾಮಾನ ಸಂಸ್ಥೆಗಳು ಹೇಳಿವೆ. 2015 ರಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಆನಂತರ ಇದೇ ಮೊದಲ ಬಾರಿಗೆ ಇಷ್ಟು ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರಿ ಮಳೆ ಹಿನ್ನೆಲೆ ತಮಿಳುನಾಡು ಸರ್ಕಾರವು ಇಂದು ಮಧ್ಯಾಹ್ನ 1.30 ಕ್ಕೆ ಚಂಬರಂಬಕ್ಕಂ ಸರೋವರದಿಂದ ಹೆಚ್ಚುವರಿ ನೀರು ಬಿಡಲು ನಿರ್ಧರಿಸಿದೆ. ಈ ಹಿನ್ನೆಲೆ ಸಿರುಕೊಳತ್ತೂರ್, ಕವನೂರ್, ಕುಂದ್ರತ್ತೂರ್, ತಿಮುಡಿವಕ್ಕಂ, ವಝತ್ತಿಯಂಬೆಡು, ತಿರುನೀರ್ಮಲೈ ಸೇರಿದಂತೆ ಅಡ್ಯಾರ್ ನದಿಯ ಎರಡೂ ಬದಿಗಳಲ್ಲಿ ವಾಸಿಸುವ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ರಾಜ್ಯ ಸರ್ಕಾರ ಸಲಹೆ ನೀಡಿದೆ.
ಚೆನ್ನೈ ಮಾತ್ರವಲ್ಲದೆ ತಿರುವಳ್ಳೂರಿನಲ್ಲಿ ಕೂಡ ಭಾರಿ ಮಳೆಯಾಗಿದ್ದು, ಪುಝಲ್ ಸರೋವರದಿಂದ ಸಹ ನೀರು ಹೊರಬಿಡಲಾಗುತ್ತಿದೆ. ವರುಣನ ಆರ್ಭಟಕ್ಕೆ ರಸ್ತೆಗಳು ಹಾಗೂ ಅಪಾರ್ಟ್ಮೆಂಟನ ಫ್ಲ್ಯಾಟ್‌ಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ಜೊತೆಗೆ ರಾಜಧಾನಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.