ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ದಿನ ದಿನಕ್ಕೂ ಕುತೂಹಲ ಕೆರಳುವಂತೆ ಮಾಡಿದೆ. ಈ ನಡುವೆ ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂದೆ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರೊಂದಿಗೆ ಎರಡು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಏಕನಾಥ ಶಿಂದೆ ಈ ನಡೆ ಭಾರಿ ಕುತುಕೂಲಕ್ಕೆ ಎಡೆ ಮಾಡಿಕೊಟ್ಟಿದೆ.
ಮಹಾರಾಷ್ಟ್ರದ ಇತ್ತೀಚಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಶಿಂದೆ, ಠಾಕ್ರೆ ಅವರೊಂದಿಗೆ ಮಾತನಾಡಿದ್ದಾರೆ. ಇದೇ ವೇಳೆ, ಅವರ ಆರೋಗ್ಯದ ಬಗ್ಗೆಯೂ ಏಕನಾಥ ಶಿಂದೆ ವಿಚಾರಿಸಿದ್ದಾರೆ ಎಂದು ಎಂಎನ್‌ಎಸ್ ನಾಯಕರೊಬ್ಬರು ಖಚಿತಪಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ತಮ್ಮ ಗುಂಪನ್ನು ಔಪಚಾರಿಕವಾಗಿ ಗುರುತಿಸಲು ಮತ್ತು ಮಹಾ ವಿಕಾಸ್ ಅಘಾಡಿ ಸರ್ಕಾರದಿಂದ ಹೊರಬರಲು ಯೋಜನೆ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಶಿವಸೇನೆ - ಎನ್‌ಸಿಪಿ - ಕಾಂಗ್ರೆಸ್ , ಬಂಡುಕೋರರು ಮತ್ತು ಸಚಿವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಶಾಸಕರನ್ನು ಅನರ್ಹತೆ ಮಾಡುವುದು ಮತ್ತು ಪಕ್ಷದಿಂದ ಅಮಾನತು ಮಾಡುವ ಯೋಚನೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಏಕನಾಥ ಶಿಂದೆ ಎಂಎನ್‌ಎಸ್ ನಾಯಕ ಹಾಗೂ ಈ ಹಿಂದೆ ಶಿವಸೇನೆಯಲ್ಲಿ ಬಾಳಾ ಸಾಹೇಬ್ ಠಾಕ್ರೆ ಅವರ ನಂತರ ಭಾರಿ ಪ್ರಭಾವಿಯಾಗಿದ್ದ ರಾಜ ಠಾಕ್ರೆ ಜತೆ ಮಾತುಕತೆ ನಡೆಸಿದ್ದಾರೆ. ಈ ಬೆಳವಣಿಗೆ ಈಗ ಮಹಾ ರಾಜಕೀಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿದೆ.
ಇದನ್ನು ಓದಿ:Maharashtra political crisis.. ಅನರ್ಹತೆಯ ನೋಟಿಸ್ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಶಿಂದೆ