ಮುಂಬೈ: ಸತತ ಏಳನೇ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ರೆಪೋ ರೇಟ್ ಅನ್ನು (ಬಡ್ಡಿ ದರವನ್ನು) ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ. ಈ ಮೂಲಕ ಬಡ್ಡಿ ದರ ಶೇಕಡಾ 4ರಷ್ಟೇ ಇರಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದರು.
ಜಾಗತಿಕ ಹಣಕಾಸು ಮಾರುಕಟ್ಟೆಯ ಏರಿಳಿತಗಳು ಮತ್ತು ಕೋವಿಡ್ ನಂತರ ಚೇತರಿಕೆಯ ಕಾರಣದಿಂದ ಬಡ್ಡಿ ದರವನ್ನು ಬದಲಾವಣೆ ಮಾಡದಿರಲು ಆರ್‌ಬಿಐ ನಿರ್ಧರಿಸಿದೆ ಎಂದು ಅವರು ವಿವರಿಸಿದರು.
ವಿತ್ತೀಯ ನೀತಿ ಸಮಿತಿ (Monetary Policy Committee- MPC) ಸಭೆ ನಡೆಸಿದ ಮೂರು ದಿನಗಳ ನಂತರ ಈ ಘೋಷಣೆ ಮಾಡಲಾಗಿದ್ದು, 2020ರ ಫೆಬ್ರವರಿಯಿಂದ ಸುಮಾರು 115 ಬೇಸಿಸ್ ಪಾಯಿಂಟ್ಗಳನ್ನು ಆರ್‌ಬಿಐ ಕಡಿತಗೊಳಿಸಿದೆ.
ರಿವರ್ಸ್ ರೆಪೋ ರೇಟ್ 3.35ರಷ್ಟಕ್ಕೆ ಫಿಕ್ಸ್ ಮಾಡಲಾಗಿದ್ದು, ಕೋವಿಡ್ ಎರಡನೇ ಅಲೆಯಿಂದ ಉಂಟಾದ ಆರ್ಥಿಕ ಬೆಳವಣಿಗೆಯ ಇಳಿಕೆ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಚೇತರಿಕೆ ಕಾಣಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆರ್ಥಿಕತೆಯು ನಿಧಾನವಾಗಿ ಚೇತರಿಕೆ ಕಾಣುತ್ತಿರುವಾಗ, ಆರ್‌ಬಿಐನ ವಿವಿಧ ದರಗಳ ಮೇಲೆ ತಿದ್ದುಪಡಿ ಮಾಡಿ ಬೆಳವಣಿಗೆಯನ್ನು ಹಳಿ ತಪ್ಪಿಸಲುಹೋಗಬಾರದು ಎಂಬ ಕಾರಣಕ್ಕೆ ದರಗಳಲ್ಲಿ ಬದಲಾವಣೆ ಮಾಡಿಲ್ಲ ಎಂದು ಶಕ್ತಿಕಾಂತ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.
ಜಿ-ಎಸ್ಎಪಿ 2.0 (G-SAP-Government Securities Acquisition Programme) ಅಥವಾ ಸರ್ಕಾರಿ ಭದ್ರತೆಗಳ ಸ್ವಾಧೀನ ಕಾರ್ಯಕ್ರಮದ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಉಲ್ಲೇಖಿಸಿದೆ.
ಈ ಕಾರ್ಯಕ್ರಮದ ಅಡಿಯಲ್ಲಿ ಎರಡನೇ ಹಂತದ ಮಾರುಕಟ್ಟೆಯಲ್ಲಿ ಬರುವ ಸುಮಾರು 50 ಸಾವಿರ ಕೋಟಿ ಮೌಲ್ಯದ ಷೇರುಗಳು, ಬಾಂಡ್ಗಳನ್ನು ಈ ತಿಂಗಳಲ್ಲಿ ಎರಡು ಹಂತಗಳಲ್ಲಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಮೂಲಕ ಬಡ್ಡಿದರಗಳಲ್ಲಿನ ವ್ಯತ್ಯಾಸವನ್ನು ಸರಿಪಡಿಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಇದನ್ನೂ ಓದಿ: ದುಬೈನಿಂದ ಮಂಗಳೂರಿಗೆ ಬಂದ ವ್ಯಕ್ತಿಯಲ್ಲಿ ಇಟಾ ರೂಪಾಂತರಿ ಪತ್ತೆ