ಉತ್ತರಕಾಶಿ (ಉತ್ತರಾಖಂಡ) : ಹಿಮಾಲಯದ ಮಡಿಲಿನಲ್ಲಿರುವ ಗಂಗೋತ್ರಿ ರಾಷ್ಟ್ರೀಯ ಉದ್ಯಾನದ ನೆಲೋಂಗ್ ಕಣಿವೆಯ ಪಗಲ್ನಾಲೆ ಬಳಿ ಅಪರೂಪದ ಹಿಮ ಚಿರತೆಯೊಂದು ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಗಡಿ ರಸ್ತೆ ಸಂಸ್ಥೆ (ಬಿಆರ್ಒ)ಯ ಮೇಜರ್ ಬಿನು ವಿ.ಎಸ್ ಅವರು, ನೆಲಾಂಗ್ ಕಣಿವೆ ಪ್ರದೇಶದಲ್ಲಿ ಅಪರೂಪದ ಈ ಹಿಮ ಚಿರತೆಯ ಫೋಟೋವನ್ನು ಸೆರೆ ಹಿಡಿದಿದ್ದಾರೆ. ಹಿಮ ಚಿರತೆ ಪತ್ತೆಯಾದ ಹಿನ್ನಲೆ ಈ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಹಿಮ ಚಿರತೆಗಳು ಅಭಿವೃದ್ಧಿ ಹೊಂದುತ್ತಿರುವುದನ್ನು ಸೂಚಿಸಿದಂತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಅಧಿಕೃತ ಮೂಲಗಳ ಮಾಹಿತಿ ಪ್ರಕಾರ ಉತ್ತರಾಖಂಡದ ಗಂಗೋತ್ರಿ ರಾಷ್ಟ್ರೀಯ ಉದ್ಯಾನವು 35 ಕ್ಕೂ ಹೆಚ್ಚು ಹಿಮ ಚಿರತೆಗಳಿಗೆ ನೆಲೆಯಾಗಿದೆ ಎಂದು ನಂಬಲಾಗಿದೆ.
ಬಿಆರ್‌ಒನ ಮೇಜರ್ ಬಿನು ವಿಎಸ್ ಅವರು, ಕಣಿವೆಯ ಪಗಲ್ನಾಲೆ ಬಳಿ ಅಳವಡಿಸಲಾದ ಕ್ಯಾಮೆರಾದಲ್ಲಿ ಹಿಮ ಚಿರತೆಯ ಇರುವ ಚಿತ್ರವನ್ನು ಸೆರೆಹಿಡಿದಿದ್ದಾರೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ವರ್ಷದಲ್ಲಿ ಇದೇ ಮೊದಲ ಭಾರಿಗೆ ಕಣಿವೆ ಪ್ರದೇಶದಲ್ಲಿ ಹಿಮ ಚಿರತೆ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ವನ್ಯಜೀವಿ ಸಂಸ್ಥೆಯ ಸದಸ್ಯೆ ಡಾ.ರಂಜನ ಪಾಲ್ ಅವರು, ಕಣಿವೆಯಲ್ಲಿ ಕ್ಯಾಮರಾ ಟ್ರ್ಯಾಪ್‌ಗಳನ್ನು ಅಳವಡಿಸಲು ತಮ್ಮ ತಂಡದೊಂದಿಗೆ ಹೊರಟಿದ್ದರು. ಈ ಸಂದರ್ಭದಲ್ಲಿ ನೆಲಾಂಗ್ ಕಣಿವೆ ಬಳಿ ಅಪರೂಪದ ಹಿಮ ಚಿರತೆಯ ಚಿತ್ರವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಇನ್ನು ವನ್ಯಜೀವಿ ಸಂಸ್ಥೆಯು ನೆಲಾಂಗ್ ಕಣಿವೆ ಮತ್ತು ಜದುಂಗ್ ಪ್ರದೇಶಗಳಲ್ಲಿ ಸುಮಾರು 65 ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಿದ್ದು, ಗಂಗೋತ್ರಿ ರಾಷ್ಟ್ರೀಯ ಉದ್ಯಾನವನದ ಸಿಬ್ಬಂದಿ, ನೆಲೋಂಗ್ ಕಣಿವೆಯ ಕೇದಾರ್ತಾಲ್, ಗೋಮುಖ್ ಟ್ರ್ಯಾಕ್ ಮತ್ತು ಭೈರೋನ್ ಘಾಟಿ ಪ್ರದೇಶಗಳಲ್ಲಿ 40 ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಿದೆ. ಇನ್ನು ಇದೇ ತಿಂಗಳ ಏಪ್ರಿಲ್ 1 ರಂದು ಈ ಉದ್ಯಾವನದ ಗೇಟ್ ತೆರೆದ ನಂತರ ಅಳವಡಿಸಿರುವ ಕ್ಯಾಮೆರಾಗಳನ್ನು ತೆಗೆದುಹಾಕಲಾಗುತ್ತದೆ.
ಅಪರೂಪದ ಹಿಮ ಚಿರತೆ ಕ್ಯಾಮರಾ ಕಣ್ಣಿಗೆ ಬಿದ್ದ ಬಳಿಕ, ಈ ಕುರಿತು ಮಾತನಾಡಿದ ಗಂಗೋತ್ರಿ ರಾಷ್ಟ್ರೀಯ ಉದ್ಯಾನವನದ ಉಪನಿರ್ದೇಶಕ ಆರ್.ಎನ್.ಪಾಂಡೆ ಅವರು, ಬಿಆರ್‌ಒದ ಮೇಜರ್ ಬಿನು ವಿಎಸ್ ಹಿಮ ಚಿರತೆಯ ಚಟುವಟಿಕೆಯನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದು ರಾಷ್ಟ್ರೀಯ ಉದ್ಯಾನವು ಹಿಮ ಚಿರತೆ ಮತ್ತು ಇತರ ಕಾಡು ಪ್ರಾಣಿಗಳಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ತೋರಿಸುತ್ತದೆ ಎಂಬುದನ್ನು ಸೂಚಿಸುತ್ತದೆ ಎಂದಿದ್ದಾರೆ.
ಇಲ್ಲಿ ಹಿಮ ಚಿರತೆ ಕಾಣಿಸಿಕೊಂಡಿರುವುದು ವನ್ಯಜೀವಿ ಪ್ರಿಯರಿಗೆ ಸಂತಸದ ಸುದ್ದಿ ತಂದಿದೆ. ಫೆಬ್ರವರಿಯಲ್ಲಿ, ಶ್ರೀನಗರ - ಲೇಹ್ ರಾಷ್ಟ್ರೀಯ ಹೆದ್ದಾರಿಯ ಬಳಿ ಹಿಮ ಚಿರತೆ ಬೇರೊಂದು ಪ್ರಾಣಿಯನ್ನು ಬೇಟೆಯಾಡಿತ್ತು. ಈ ವೇಳೆ, ಬೇಟೆಯಾಡುವ ಅಪರೂಪದ ದೃಶ್ಯವನ್ನು ಲಡಾಖ್‌ನ ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್‌ನ ಅಧ್ಯಕ್ಷರಾದ ರಾಹುಲ್ ಕೃಷ್ಣ ಅವರು ಸೆರೆಹಿಡಿದಿದ್ದು, ಎಲ್ಲ ಕಡೆ ಪ್ರಶಂಸೆ ವ್ಯಕ್ತವಾಗಿತ್ತು.
ಇದನ್ನೂ ಓದಿ :ಅಪರೂಪದಲ್ಲಿ ಅಪರೂಪ ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡ ಬಿಳಿ ಕಾಂಗರೂಗಳು