ಕದಿರಿ (ಆಂಧ್ರಪ್ರದೇಶ): ಅಕ್ಷರ ಕಲಿಸುವ ಶಿಕ್ಷಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಅತ್ಯಾಚಾರವೆಸಗಿದ್ದಾನೆ. ಶಿಕ್ಷನ ಈ ಕೃತ್ಯದಿಂದ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದಾಗ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿಯಲ್ಲಿ ನಡೆದಿದೆ.
ಒಂಬತ್ತು ತಿಂಗಳ ಹಿಂದೆ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ 16 ವರ್ಷದ ಬಾಲಕಿ ಹತ್ತನೇ ತರಗತಿ ಓದುತ್ತಿದ್ದಾಗ ನೀರು ಕುಡಿಯಲು ಸಿಬ್ಬಂದಿ ಕೊಠಡಿಗೆ ಹೋಗಿದ್ದಳು. ಈ ವೇಳೆ ಕೊಠಡಿಯಲ್ಲಿ ಒಬ್ಬನೇ ಕೂತಿದ್ದ ಶಿಕ್ಷಕ ರೆಡ್ಡಿ ನಾಗಯ್ಯ, ಒಬ್ಬಳೇ ಬಂದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದನು. ಮಾತ್ರವಲ್ಲದೆ ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದನು. ಇದರಿಂದ ಭಯಗೊಂಡಿದ್ದ ವಿದ್ಯಾರ್ಥಿನಿ ಮೇಲೆ, ಶಿಕ್ಷಕ ರೆಡ್ಡಿ ನಾಗಯ್ಯ ಹಲವು ಬಾರಿ ಅತ್ಯಾಚಾರ ಎಸಗಿದ್ದ.
ಶನಿವಾರ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅಲ್ಲಿನ ವೈದ್ಯರು, ಬಾಲಕಿಗೆ ತೀವ್ರ ರಕ್ತಸ್ರಾವವಾಗಿ, ರಕ್ತ ಕಡಿಮೆಯಾದ ಕಾರಣ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಆಕೆಯನ್ನು ಚಿಕಿತ್ಸೆಗಾಗಿ ಅನಂತಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಹೊರಠಾಣೆ ಪೊಲೀಸರ ಮೂಲಕ ಎಸ್ ಐ ರಾಜಶೇಖರ್ ಅವರಿಗೆ ಮಾಹಿತಿ ತಿಳಿದಿದೆ. ಈ ಹಿನ್ನೆಲೆ ಪೊಲೀಸರು ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅನಂತಪುರ ಆಸ್ಪತ್ರೆಗೆ ತೆರಳಿ ಬಾಲಕಿಯನ್ನು ಭೇಟಿ ಮಾಡಿದ ಕದಿರಿ ಡಿಎಸ್ಪಿ ಶ್ರೀಲತಾ ಅವರು ಘಟನೆ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 376 ಹಾಗೂ 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: 5ನೇ ತರಗತಿ ವಿದ್ಯಾರ್ಥಿನಿ ಅತ್ಯಾಚಾರ.. ಆರೋಪಿಯನ್ನು ಒಪ್ಪಿಸುವಂತೆ ಆಗ್ರಹಿಸಿ ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು