ಕಾಮರೆಡ್ಡಿ, ತೆಲಂಗಾಣ: ಇತ್ತೀಚೆಗೆ ಕಾಮರೆಡ್ಡಿ ಜಿಲ್ಲಾ ಕೇಂದ್ರದ ಕಾಲೋನಿಯಲ್ಲಿ ಇಬ್ಬರು ಯುವಕರು ಬಾಲಕಿ (17) ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಕಾಮರೆಡ್ಡಿ ಡಿಎಸ್‌ಪಿ ಪ್ರಕಾಶ್ ನೀಡಿರುವ ಮಾಹಿತಿ ಪ್ರಕಾರ, ಇಂಟರ್ ಮುಗಿಸಿ ಮನೆಯಲ್ಲಿದ್ದ ಬಾಲಕಿಯನ್ನು ಅದೇ ಕಾಲೋನಿ ನಿವಾಸಿ ಡಿಗ್ರಿ ವಿದ್ಯಾರ್ಥಿ ಫಯಾಜ್ ಎಂಬಾತ, ತನ್ನ ಪ್ರೀತಿಯ ಬಲೆಗೆ ಕೆಡವಿದ್ದಾನೆ. ಬಳಿಕ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ. ಒಂದು ದಿನ ಆಕೆಯನ್ನು ಮನೆಗೆ ಕರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ವಿಷಯವನ್ನು ಎಲ್ಲರಿಗೂ ಹೇಳುತ್ತಾಳೆ ಎಂದು ಹೆದರಿದ ಫಯಾಜ್ ತನ್ನ ಸ್ನೇಹಿತ ಅಲ್ತಾಫ್ನಿಂದಲೂ ಅತ್ಯಾಚಾರಕ್ಕೆ ಪ್ರೇರೇಪಿಸಿದ್ದಾನೆ. ಇಬ್ಬರೂ ಸುಮಾರು ಮೂರು ತಿಂಗಳ ಕಾಲ ಸಂತ್ರಸ್ತೆಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ. ಕೆಲ ದಿನಗಳಿಂದ ಬಾಲಕಿ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಆಕೆಯ ತಾಯಿಗೆ ಅನುಮಾನ ಬಂದು ವಿಚಾರಿಸಿದ್ದಾರೆ. ಆಗ ಸತ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಷಕರು ಅತ್ಯಾಚಾರ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲಿಸಲಾಗಿದೆ. ಶುಕ್ರವಾರ ಇಬ್ಬರು ಯುವಕರನ್ನು ಬಂಧಿಸಿ ರಿಮಾಂಡ್ ಮಾಡಲಾಗಿದೆ ಎಂದು ಡಿಎಸ್‌ಪಿ ತಿಳಿಸಿದ್ದಾರೆ.
ದೀಪ್ತಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನ: ಜಗಿತ್ಯಾಲ ಜಿಲ್ಲೆಯ ಕೋರುಟ್ಲ ಪಟ್ಟಣದಲ್ಲಿ ಸಂಚಲನ ಮೂಡಿಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ದೀಪ್ತಿ (24) ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪ್ರಕಾಶಂ ಜಿಲ್ಲೆಯ ಓಂಗೋಲು ತಾಲೂಕಿನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ದೀಪ್ತಿ ಅವರ ಸಹೋದರಿ ಚಂದನಾ, ಆಕೆಯ ಸ್ನೇಹಿತ ಮತ್ತು ಚಾಲಕನೆಂದು ಭಾವಿಸಲಾಗುತ್ತಿರುವ ಇನ್ನೊಬ್ಬ ವ್ಯಕ್ತಿ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.
ಕೋರುಟ್ಲದ ದೀಪ್ತಿ ಎಂಬವರು ಕಳೆದ ತಿಂಗಳು 29 ರಂದು ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಬಳಿಕ ಆಕೆಯ ತಂಗಿ ಚಂದನಾ ನಾಪತ್ತೆಯಾಗಿದ್ದರು. ದೀಪ್ತಿ ಅವರ ತಂದೆ ಶ್ರೀನಿವಾಸ್ ರೆಡ್ಡಿ ಚಂದನ ಅವರು ಮತ್ತೊಬ್ಬ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಗುರುವಾರ ರಾತ್ರಿ ಚಂದನಾ ಮತ್ತು ಇತರರು ಚೆನ್ನೈನಿಂದ ಒಂಗೋಲ್ ಕಡೆಗೆ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿಯಿಂದ ಪ್ರಕಾಶಂ ಜಿಲ್ಲಾ ಪೊಲೀಸರು ಅಲರ್ಟ್ ಆಗಿದ್ದರು.
ಜಿಲ್ಲಾ ಎಸ್ಪಿ ಮಲಿಕಾ ಗರ್ಗ್ ಅವರ ಆದೇಶದ ಮೇರೆಗೆ ಪೊಲೀಸ್ ಸಿಬ್ಬಂದಿ ವ್ಯಾಪಕ ತಪಾಸಣೆ ನಡೆಸಿದ್ದರು. ಚಂದನಾ ಮತ್ತು ಆಕೆಯ ಸ್ನೇಹಿತರು ಪ್ರಯಾಣಿಸುತ್ತಿದ್ದ ವಾಹನದ ಚಲನವಲನವನ್ನು ಗ್ರಹಿಸಿದ ಪೊಲೀಸರು ಸಿಂಗರಾಯಕೊಂಡದಿಂದ ಅವರನ್ನು ಹಿಂಬಾಲಿಸಿದ್ದರು. ಮತ್ತೊಂದು ಪೊಲೀಸ್ ತಂಡ ಟಂಗುಟೂರು ಟೋಲ್‌ಗೇಟ್‌ನಲ್ಲಿ ಬೀಡುಬಿಟ್ಟಿತ್ತು. ಆದರೆ, ಚಂದನಾ ತಂಡವು ಅನುಮಾನಗೊಂಡು ತಮ್ಮ ವಾಹನವನ್ನು ಒಂಗೋಲ್ ನಗರಕ್ಕೆ ತಿರುಗಿಸಿದ್ದರು.
ಕೆಲಹೊತ್ತು ಹುಡುಕಾಡಿದ ಪೊಲೀಸರು ರಾತ್ರಿ ವೇಳೆ ಅವರೆಲ್ಲರ ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ. ಬಳಿಕ ಆರೋಪಿಗಳನ್ನು ಲಾಡ್ಜ್‌ನಲ್ಲಿ ಬಂಧಿಸಲಾಯಿತು. ಮೊದಲು ಸ್ಥಳೀಯ ತಾಲೂಕು ಠಾಣೆಗೆ ಕರೆದೊಯ್ದು ನಂತರ ಜಗಿತ್ಯಾಲ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಗೊತ್ತಾಗಿದೆ. ಪೊಲೀಸ್ ಮೂಲಗಳು ಇದನ್ನು ಖಚಿತಪಡಿಸುತ್ತಿಲ್ಲ. ಚಂದನಾ ವಿದೇಶಕ್ಕೆ ಹೋಗದಂತೆ ಲುಕ್ ಔಟ್ ನೋಟಿಸ್ ಜಾರಿ ಮಾಡಲು ಕೂಡ ಸಿದ್ಧತೆ ನಡೆಸಿದ್ದೇವೆ ಎಂದು ಕೋರುಟ್ಲ ಸಿಐ ಪ್ರವೀಣ್ ಕುಮಾರ್ ತಿಳಿಸಿದ್ದಾರೆ. ತನ್ನ ಸಹೋದರಿಯನ್ನು ಸಾಯಿಸಿಲ್ಲ ಎಂದು ಚಂದನಾ ಬುಧವಾರ ತನ್ನ ಸಹೋದರನಿಗೆ ಕಳುಹಿಸಿರುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಕುಟುಂಬಸ್ಥರು ಇದನ್ನು ಖಚಿತಪಡಿಸಿಲ್ಲ.
ಓದಿ: ಅನುಮಾನ ಭೂತಕ್ಕೆ ಎರಡು ಬಲಿ.. ಪತ್ನಿ ಕೊಂದು ಪೊಲೀಸ್ ಠಾಣೆಗೆ ಶರಣಾಗಲು ತೆರಳುತ್ತಿದ್ದ ಪತಿ ಸಾವು!