ರಾಂಚಿ (ಜಾರ್ಖಂಡ್): ಪ್ರೇಮ ಕಲಹ ವಿಷಯವಾಗಿ ಮೂವರು ದುಷ್ಕರ್ಮಿಗಳು ಶನಿವಾರ ಬೆಳಗಿನ ಜಾವ ಯುವತಿಯ ಮನೆಗೆ ನುಗ್ಗಿ ಇಬ್ಬರನ್ನು ಕೊಲೆ ಮಾಡಿರುವ ಪ್ರಕರಣ ಜಾರ್ಖಂಡ್ನ ರಾಂಚಿಯಲ್ಲಿ ನಡೆದಿದೆ. 17 ವರ್ಷದ ಶ್ವೇತಾ ಸಿಂಗ್ ಮತ್ತು ಆಕೆಯ ತಮ್ಮ 14 ವರ್ಷದ ಪ್ರವೀಣ್ ಕುಮಾರ್ ಅಲಿಯಾಸ್ ಓಂ ಎಂಬುವವರೇ ಕೊಲೆಯಾದವರು. ಅಲ್ಲದೇ, ಈ ಘಟನೆಯಲ್ಲಿ ತಾಯಿ ಚಂದಾದೇವಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ರಾಂಚಿಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುತ್ತಿಗೆ-ಚಾಕುವಿನಿಂದ ದಾಳಿ: ಇಲ್ಲಿನ ಪಂಡರ ಪೊಲೀಸ್ ಠಾಣಾ ವ್ಯಾಪ್ತಿಯ ಜನಕ್ ನಗರದಲ್ಲಿ ಈ ಕೃತ್ಯ ನಡೆದಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮನೆಗೆ ಬಂದು ಹಂತಕರು ಬಾಗಿಲು ಬಡಿದಿದ್ದಾರೆ. ಆಗ ಶ್ವೇತಾ ಬಂದು ಬಾಗಿಲು ತೆರೆದಾಗ ಬಾಗಿಲಿನಲ್ಲೇ ಸುತ್ತಿಗೆ-ಚಾಕುವಿನಿಂದ ದಾಳಿ ಮಾಡಿದ್ದಾರೆ. ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಂತರ ಸಹೋದರ ಪ್ರವೀಣ್ ಮತ್ತು ತಾಯಿ ಚಂದಾದೇವಿ ಮೇಲೂ ಹಂತಕರು ದಾಳಿ ನಡೆಸಿದ್ದಾರೆ. ಇದರಿಂದ ಈ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ತಿಳಿದ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ನಂತರ ಮನೆಯ ಬಾಗಿಲಿನಿಂದ ರಕ್ತ ಹರಿದು ಹೊರಗೆ ಬರುತ್ತಿರುವುದು ಕಂಡ ಸ್ಥಳೀಯರು ಚಂದಾದೇವಿ ತಂದೆ ರಾಮಧರ್ ಸಿಂಗ್ಗೆ ಮಾಹಿತಿ ನೀಡಿದ್ದಾರೆ. ಆಗ ತಕ್ಷಣವೇ ಸ್ಥಳಕ್ಕೆ ಓಡಿ ಬಂದು ನೋಡಿದಾಗ ಪ್ರವೀಣ್ ಮತ್ತು ಚಂದಾದೇವಿ ಇನ್ನೂ ಉಸಿರಾಡುತ್ತಿದ್ದರು. ಹೀಗಾಗಿ ಇಬ್ಬರನ್ನೂ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಪ್ರವೀಣ್ ಮೃತಪಟ್ಟಿದ್ದಾನೆ. ಕೊಲೆಯಾದ ಶ್ವೇತಾ ಮತ್ತು ಪ್ರವೀಣ್ನ ತಂದೆ ಸಂಜೀವ್ ಕುಮಾರ್ ಸಿಂಗ್ ಅಬುಧಾಬಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪ್ರೇಮ ಕಲಹವೇ ಕೊಲೆಗೆ ಕಾರಣ: ಈ ಜೋಡಿ ಕೊಲೆಗಳಿಗೆ ಪ್ರೇಮ ಪ್ರಕರಣವೇ ಕಾರಣ ಹಾಗೂ ರೋಹನ್ ಎಂಬುವವ ತನ್ನ ಇಬ್ಬರು ಸಹಚರರೊಂದಿಗೆ ಸೇರಿ ಕೃತ್ಯ ಎಸಗಿದ್ದಾನೆ ಎಂದು ಎನ್ನಲಾಗುತ್ತಿದೆ. ಕೊಲೆಯಾದ ಶ್ವೇತಾ ಮತ್ತು ಆರೋಪಿ ರೋಹನ್ ನಡುವೆ ಪ್ರೇಮ ಸಂಬಂಧವಿತ್ತು. ಈ ಹಿಂದೆ ಇಬ್ಬರ ನಡುವೆ ಜಗಳ ಕೂಡ ಆಗಿತ್ತು. ಈ ವಿವಾದ ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿತ್ತು. ಬಳಿಕ ಸಮಸ್ಯೆ ಬಗೆಹರಿದಿತ್ತು ಎಂದು ಹೇಳಲಾಗುತ್ತಿದೆ.
ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಈ ದಾಳಿಯಲ್ಲಿ ಬದುಕುಳಿದ ಚಂದಾದೇವಿಯ ಹೇಳಿಕೆ ದಾಖಲಿಸಿಕೊಂಡು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಶಾರ್ಪ್ ಶೂಟರ್ ಸಂತೋಷ್ ಜಾಧವ್ ಗ್ಯಾಂಗ್ನ 7 ಸದಸ್ಯರ ಬಂಧನ, 13 ಪಿಸ್ತೂಲ್ ವಶಕ್ಕೆ