ಹೈದರಾಬಾದ್ : ರಾಮೋಜಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ರಾಮೋಜಿ ರಾವ್ ಅವರ ಮೊಮ್ಮಗಳು ಬೃಹತಿ ಅವರ ವಿವಾಹ ಸಮಾರಂಭ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿಯಾಗಿ ನೆರವೇರುತ್ತಿದೆ. ದಂಡಮೂಡಿ ಅಮರ್ ಮೋಹನ ದಾಸ್-ಅನಿತಾ ದಂಪತಿಯ ಸುಪುತ್ರ ವೆಂಕಟ್ ಅಕ್ಷಯ್ ಹಾಗೂ ಈನಾಡು ವ್ಯವಸ್ಥಾಪಕ ನಿರ್ದೇಶಕ ಕಿರಣ್-ಶೈಲಜಾ ದಂಪತಿಯ ಸುಪುತ್ರಿ ಬೃಹತಿ ಅವರು ರಾತ್ರಿ 12 ಗಂಟೆ 18 ನಿಮಿಷಕ್ಕೆ ಶುಭ ಮುಹೂರ್ತದಲ್ಲಿ ನವ ಜೀವನಕ್ಕೆ ಕಾಲಿಡುತ್ತಿದ್ದಾರೆ. ಗಣ್ಯಾತಿಗಣ್ಯರು ರಾಮೋಜಿ ಫಿಲಂ ಸಿಟಿಗೆ ಆಗಮಿಸಿ ಹೊಸ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ಅದ್ಧೂರಿ ಮದುವೆ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ. ಜೊತೆಗೆ ಚಿತ್ರರಂಗದ ಸ್ಟಾರ್ ನಟರಾದ ರಜನಿಕಾಂತ್, ಪವನ್ ಕಲ್ಯಾಣ್, ಚಿರಂಜೀವಿ ಸೇರಿದಂತೆ ಅನೇಕರು ಆಗಮಿಸಿ, ನವಜೋಡಿಗೆ ಶುಭ ಹಾರೈಸಿದ್ದಾರೆ. ವಿಶೇಷವಾಗಿ ವಿನ್ಯಾಸಗೊಳಿಸಿರುವ ವೇದಿಕೆಯಲ್ಲಿ ವಿವಾಹ ಸಮಾರಂಭ ಆಯೋಜಿಸಲಾಗಿದ್ದು, ಆಕರ್ಷಕ ದೀಪದ ಅಲಂಕಾರ ಮಾಡಲಾಗಿದೆ.
ಪ್ರಮುಖವಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ದಂಪತಿ, ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ, ತೆಲಂಗಾಣ ಸಚಿವರಾದ ಹರೀಶ್ ರಾವ್, ಮೊಹಮ್ಮದ್ ಅಲಿ, ಇಂದ್ರಕರನ್ ರೆಡ್ಡಿ ಆಗಮಿಸಿದ್ದಾರೆ. ಇದರ ಜೊತೆಗೆ ಖ್ಯಾತ ಟಾಲಿವುಡ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ಮತ್ತು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸೇರಿದಂತೆ ಅನೇಕರು ಹಾಜರಾದರು.